ನವದೆಹಲಿ : ಕೊರೊನಾ ವಿರುದ್ಧದ ಹೋರಾಟದ ಈ ಸಂದರ್ಭದಲ್ಲಿ ದೇಶದ ಜನರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವ ಬದಲು ಏರಿಕೆ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಬೆಲೆ ಏರಿಕೆ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ..’ಕೋವಿಡ್-19 ವಿರುದ್ಧದ ಹೋರಾಟವು ಕೋಟ್ಯಂತರ ಸಹೋದರ ಸಹೋದರಿಯರನ್ನು ಆರ್ಥಿಕವಾಗಿ ಕಷ್ಟಕ್ಕೀಡುಮಾಡಿದೆ. ಇಂತಹ ಸಂದರ್ಭದಲ್ಲಿ ಇಂಧನ ದರ ಇಳಿಕೆ ಮಾಡುವ ಬದಲು ಪೆಟ್ರೋಲ್, ಡೀಸೆಲ್ ದರವನ್ನು ಕ್ರಮವಾಗಿ 10 ಹಾಗೂ 13ರಷ್ಟು ಹೆಚ್ಚಿಸುವ ನಿರ್ಧಾರ ಸರಿಯಲ್ಲ. ಈ ನಿರ್ಧಾರವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.
ಇನ್ನು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ ಕ್ರಮವಾಗಿ 10 ಹಾಗೂ 13 ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಹೇಳಿತ್ತು. ಆದರೆ, ಈ ಸುಂಕ ಹೆಚ್ಚಳದಿಂದ ಮಾರಾಟ ದರದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ತೈಲ ಕಂಪನಿಗಳಿಗೆ ಮಾತ್ರ ಹೊರೆಯಾಗಲಿದೆ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.








