ಟೆಲ್ ಅವೀವ್ : ಕೋವಿಡ್-19 ಗೆ ಇನ್ನೂ ಔಷಧಿ ಪತ್ತೆಯಾಗಿಲ್ಲ. ಹಲವು ದೇಶಗಳಲ್ಲಿ ಔಷಧಿ ಕಂಡು ಹಿಡಿಯುವ ಪ್ರಯೋಗ ನಡೆಯುತ್ತಿದೆ. ಇದರ ಮಧ್ಯೆ ಇಸ್ರೇಲ್ ಕೊರೊನಾ ವೈರಸ್ ಗೆ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದೆ. ಈ ಬಗ್ಗೆ ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಮಾಹಿತಿ ನೀಡಿದ್ದು, ಇಸ್ರೇಲ್ ಇನ್ ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಸಂಸ್ಥೆ ಕೊರೊನಾ ವೈರಸ್ ಗೆ ಪ್ರತಿಕಾಯಗಳನ್ನು(ಆಂಟಿಬಾಡಿ) ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದ್ದಾರೆ.
ಈ ಮೊನೊ ಕ್ಲೋನಲ್ ಆಂಟಿಬಾಡೀಸ್ ಸೋಂಕು ಪೀಡಿತರ ದೇಹದೊಳಗಿರುವ ವೈರಸ್ ನಿರ್ಮೂಲನೆ ಮಾಡುತ್ತದೆ ಅಥವಾ ಕೆಲಸ ಮಾಡದಂತೆ ತಟಸ್ಥಗೊಳಿಸುತ್ತದೆ. ಇದರಿಂದಾಗಿ ಸೋಂಕು ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ. ವಿಶ್ವಾದ್ಯಂತ ಇರುವ ವಿವಿಧ ಕಂಪನಿಗಳ ಜೊತೆ ಈ ಪ್ರತಿಕಾಯಗಳ ಉತ್ಪಾದನೆ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ನಫ್ತಾಲಿ ಬೆನೆಟ್ ಹೇಳಿದ್ದಾರೆ.
ಇನ್ನು ಸಿಂಗಲ್ ರಿಕವರಿ ಸೆಲ್ ನಿಂದ ತಯಾರಿಸಿದ ಒಂದು ಮದ್ದಿಗೆ ಇಸ್ರೇಲ್ ಈಗಾಗಲೇ ಪೇಟೆಂಟ್ ಮಾಡಿಸಿದ್ದು, ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಚಿಂತನೆ ನಡೆಸಿದೆ.








