ಹಾಸನ: ಸಕಲೇಶಪುರದಲ್ಲಿ ನಡೆದ ಪ್ರಜಾಸೇವೆ ಸಭೆಯಲ್ಲಿ ಅಧಿಕಾರಿಗಳಿಗೆ ಗೌರವಯುತವಾಗಿ ಏನಾದರೂ ಕೊಡುವುದು ನಿಮ್ಮ ಧರ್ಮ ಎಂದು ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಶಿವಲಿಂಗೇಗೌಡ ಅವರ ಸಂಕಷ್ಟ ಈಗ ರಾಜ್ಯಪಾಲರ ಅಂಗಳ ತಲುಪಿದೆ. ಲಂಚವನ್ನು ಪ್ರೋತ್ಸಾಹಿಸಿದ ಆರೋಪದ ಮೇಲೆ ಸಚಿವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ಅಧಿಕೃತ ದೂರು ಸಲ್ಲಿಸಿದ್ದು, ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.
ದೂರಿನಲ್ಲೇನಿದೆ
ಸಚಿವ ಶಿವಲಿಂಗೇಗೌಡರ ಹೇಳಿಕೆಯು ಭ್ರಷ್ಟಾಚಾರ ತಡೆ ಕಾಯ್ದೆ 1988ರ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಲಂಚ ಸ್ವೀಕಾರ, ಲಂಚ ನೀಡಿಕೆ ಮತ್ತು ಅಂತಹ ಕೃತ್ಯಕ್ಕೆ ಪ್ರಚೋದನೆ ನೀಡುವುದು ಕಾನೂನುಬಾಹಿರ. ಸಚಿವರೇ ಸ್ವತಃ ಇಂತಹ ಹೇಳಿಕೆ ನೀಡಿರುವುದು ಸಂವಿಧಾನದ ಪರಿಚ್ಛೇದ 14ರ ಉಲ್ಲಂಘನೆಯಾಗಿದೆ. ಆದ್ದರಿಂದ ರಾಜ್ಯಪಾಲರು ಈ ಕೂಡಲೇ ಮಧ್ಯಪ್ರವೇಶಿಸಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಮೇಲ್ ಮೂಲಕ ದೂರು ರವಾನಿಸಿದ್ದಾರೆ.
ನಾನೇನು ದುಡ್ಡು ಕೊಡಿ ಅಂದ್ನಾ
ತಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸಚಿವ ಶಿವಲಿಂಗೇಗೌಡ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನೇನು ನೇರವಾಗಿ ಹಣ ಕೊಡಿ ಎಂದು ಹೇಳಿದ್ದೇನಾ? ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಆಗ ಪರಿಸ್ಥಿತಿಯನ್ನು ಸಮಾಧಾನಪಡಿಸಲು ಕೆಲಸ ಮಾಡಿಕೊಟ್ಟ ಅಧಿಕಾರಿಗಳ ಜೊತೆ ಗೌರವಯುತವಾಗಿ ನಡೆದುಕೊಳ್ಳಿ, ಅವರಿಗೆ ಗೌರವ ನೀಡಿ ಎಂದು ಹೇಳಿದ್ದೇನಷ್ಟೇ. ಇದನ್ನು ಯಾಕೆ ಇಷ್ಟು ದೊಡ್ಡದು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ವಿವಾದದ ಹಿನ್ನೆಲೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಸಚಿವ
ಸಕಲೇಶಪುರ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನಡೆದಿದ್ದ ಸಭೆಯಲ್ಲಿ ಸಚಿವರು, ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದರು. ಸಚಿವರ ಈ ಮಾತಿಗೆ ಅಲ್ಲಿದ್ದ ಜನರು ಕೂಡಲೇ ತಿರುಗೇಟು ನೀಡಿದ್ದರು. ಅಧಿಕಾರಿಗಳಿಗೆ ಸಂಬಳ ಕೊಡಲ್ವಾ? ನಾವು ಅವರಿಗೆ ಯಾಕೆ ಏನನ್ನಾದರೂ ಕೊಡಬೇಕು? ಎಂದು ಜನರು ಸಚಿವರನ್ನು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಸರ್ಕಾರಕ್ಕೆ ಮುಜುಗರ ಉಂಟುಮಾಡಿತ್ತು.
ಸಚಿವರ ಒಂದು ಮಾತು ಈಗ ರಾಜ್ಯಪಾಲರ ಮಟ್ಟಕ್ಕೆ ಹೋಗಿದ್ದು, ಭ್ರಷ್ಟಾಚಾರದ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗುವ ಮುನ್ಸೂಚನೆ ಸಿಕ್ಕಿದೆ. ರಾಜ್ಯಪಾಲರು ಈ ದೂರಿನ ಮೇಲೆ ಎಂತಹ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.








