ಬೆಂಗಳೂರು : ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿಶೇಷ ಅಧಿವೇಶನ ಆಹ್ವಾನಿಸಿ ಎಂಬ ಒತ್ತಾಯದ ಹಿನ್ನೆಲೆ ನಾಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಭೇಟಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಸಮಯ ನಿಗದಿಪಡಿಸಿದ್ದಾರೆ.
ನಿನ್ನೆ ಸರ್ಕಾರ ವತಿಯಿಂದ 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿಶೇಷ ಅಧಿವೇಶನ ಕರೆಯುವ ಅನಿವಾರ್ಯತೆ ಇಲ್ಲ. ವಿಪಕ್ಷದವರ ಅಹವಾಲು ಆಲಿಸಲು ಸರ್ಕಾರ ಮುಂದಾಗಬೇಕು. ವಿಪಕ್ಷ ನಾಯಕರು ಮತ್ತು ಕೆಪಿಸಿಸಿ ಅಧ್ಯಕ್ಷರು ನನ್ನನ್ನು ಭೇಟಿಯಾಗಲು ಸಮಯಾವಕಾಶ ಕೇಳಿದ್ದಾರೆ. ಅದಕ್ಕೆ ನಾನು ಸಮಯ ನಿಗದಿಪಡಿಸುತ್ತೇನೆ ಎಂದು ನಿನ್ನೆ ಯಡಿಯೂರಪ್ಪ ತಿಳಿಸಿದ್ದರು.
ಅದರಂತೆ ವಿಪಕ್ಷ ನಾಯಕರ ಭೇಟಿಗೆ ಸಿಎಂ ಯಡಿಯೂರಪ್ಪ ಸಮಯ ನಿಗದಿ ಮಾಡಿದ್ದಾರೆ. ನಾಳೆ ಬೆಳಗ್ಗೆ 11:30 ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿಗೆ ಸಮಯ ನಿಗದಿಯಾಗಿದೆ.








