ನವದೆಹಲಿ : ಜಗತ್ತಿನಾದ್ಯಂತ ಕೊರೊನಾ ವೈರಸ್ ತಲ್ಲಣ ಸೃಷ್ಟಿಸುತ್ತಿದ್ದು, ಮರಣ ಮೃದಂಗ ಬಾರಿಸುತ್ತಾ ಅಬ್ಬರಿಸುತ್ತಿದೆ. ಈ ಹೆಮ್ಮಾರಿಗೆ ಕಡಿವಾಣ ಹಾಕಲು ವೈದ್ಯರು ಹಲವು ಪ್ರಯೋಗಗಳಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಹೆಚ್ ಐವಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಯನ್ನ ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅನುಮತಿ ನೀಡಿದೆ. ಈ ಬಗ್ಗೆ ಸಂಸ್ಥೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಯಾವ ವಿಧಾನದಲ್ಲಿ ಚಿಕಿತ್ಸೆಯನ್ನು ನೀಡಬೇಕೆಂದು ವಿವರಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ರೋಗದ ತೀವ್ರತೆ ಮಧ್ಯಮ ಪ್ರಮಾಣದಲ್ಲಿ ಇದ್ದಾಗ ಮಾತ್ರ ಈ ಚಿಕಿತ್ಸೆಯನ್ನು ನೀಡಬೇಕೆಂದು ಹೇಳಲಾಗಿದೆ. ಐಸಿಎಂಆರ್ ಕೇವಲ ಈ ಒಂದೇ ಔಷಧವನ್ನು ಮಾತ್ರ ಸೂಚಿಸಿಲ್ಲ, ಇದರ ಜೊತೆಗೆ ಇನ್ನೂ ಹನ್ನೆರಡು ಬಗೆಯ ಔಷಧಿಗಳನ್ನು ಗುರುತಿಸಿದೆ.
ಎಬೋಲಾಕ್ಕೆ ಬಳಸುವ ಔಷಧಿ, ಕುಷ್ಠರೋಗದ ಚಿಕಿತ್ಸೆಗೆ ಬಳಸುವ ಬ್ಯಾಕ್ಟೀರಿಯಂ ಡಬ್ಲ್ಯೂ, ಕುಡಿತದ ಚಟ ಬಿಡಿಸಲು ಬಳಕೆ ಮಾಡುವ ಡಿಸುಲ್ ಫಿರಾಮ್,ಹೃದಯ ಸಂಬಂಧಿ ಮತ್ತು ಇತರೆ ಖಾಯಿಲೆಗಳಿಗೆ ಬಳಸಲಾಗುವ ರೆಸ್ವೆರಟ್ರೋಲ್, ಈ ಔಷಧಿಗಳನ್ನ ಈಗಾಗಲೇ ಕ್ಲಿನಿಕಲ್ ಟ್ರೈಯಲ್ ನಲ್ಲಿ ಬಳಸಲಾಗುತ್ತಿದೆ. ಸದ್ಯಕ್ಕೆ ಕೊರೊನಾ ವಿರುದ್ಧ ಹೋರಾಡಲು ಯಾವುದೇ ಔಷಧಿ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಈಗಿರುವ ಔಷಧಿಗಳಲ್ಲೇ ಒಂದಷ್ಟನ್ನ ಐಸಿಎಂಆರ್ ಸೂಚಿಸಿದ್ದು, ಇವುಗಳನ್ನೇ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ.








