ಬೆಂಗಳೂರು ಮಳೆಹಾನಿ ಪ್ರದೇಶಗಳಿಗೆ ಬೊಮ್ಮಾಯಿ ಭೇಟಿ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜಲಾವೃತಗೊಂಡಿರುವ ಬೆಂಗಳೂರು ನಗರದ ಯಲಹಂಕ, ಜಕ್ಕೂರು, ಬ್ಯಾಟರಾಯನಪುರ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಯಲಹಂಕ, ಬ್ಯಾಟರಾಯನಪುರ ಸುತ್ತಮುತ್ತ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಹಲವು ಬಡಾವಣೆಗಳು ಜಲಾವೃತವಾಗಿದೆ.
ಮಳೆಯಿಂದಾಗಿ ಕೆರೆಗಳು ಉಕ್ಕಿ ಹರಿಯುತ್ತಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಹಲವೆಡೆ, ಮನೆಗಳು ಹಾಗೂ ರಸ್ತೆಗೆ ಹಾನಿಯಾಗಿದೆ ಎಂದು ಹೇಳಿದರು.
ಹಲವೆಡೆ ರಾಜಕಾಲುವೆ ಒತ್ತುವರಿಯಾಗಿರುವುದೂ ಕೂಡ ಪ್ರವಾಹ ಪರಿಸ್ಥಿತಿ ಉಂಟಾಗಲು ಕಾರಣವಾಗಿದೆ.
NGT ಆದೇಶದಂತೆ ಬಫರ್ ವಲಯದಲ್ಲಿರುವ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಆ ಬಗ್ಗೆ ಬಿಬಿಎಂಪಿ ಸಂಬಂಧಿಸಿದವರಿಗೆ ನೋಟಿಸ್ ನೀಡಿ, ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮಳೆಯಿಂದಾಗಿ ಹಾಳಾಗಿರುವ ರಸ್ತೆ, ಗುಂಡಿಗಳ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವುದು.
ಮೊದಲಿಗೆ ಮುಖ್ಯ ರಸ್ತೆಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು









