ಬೆಂಗಳೂರು: ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ (KRRDA)ಯಲ್ಲಿ ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 80ಕ್ಕೂ ಅಧಿಕ ಹೊರಗುತ್ತಿಗೆ ಇಂಜಿನಿಯರ್ಗಳಿಗೆ ಕಳೆದ ಏಳು ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 2026ರಿಂದ ಇಂಜಿನಿಯರ್ಗಳಿಗೆ ವೇತನ ಪಾವತಿಯಾಗದೆ ಇರುವುದರಿಂದ ಅವರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಮನೆ ನಿರ್ವಹಣೆ, ಮಕ್ಕಳ ಶಿಕ್ಷಣ, ಸಾಲದ ಕಂತುಗಳು ಸೇರಿದಂತೆ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರ್. ಅಶೋಕ್ ಕಳವಳ ವ್ಯಕ್ತಪಡಿಸಿದ್ದಾರೆ.
ಅನುದಾನದ ಕೊರತೆಯ ನೆಪದಲ್ಲಿ ತಿಂಗಳುಗಟ್ಟಲೆ ವೇತನ ತಡೆಹಿಡಿಯುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿರುವ ಅವರು, ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಹಗಲಿರುಳು ಶ್ರಮಿಸುವ ಇಂಜಿನಿಯರ್ಗಳ ಬದುಕಿನ ಬಗ್ಗೆಯೂ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿದ್ದರೂ ಈ ಇಂಜಿನಿಯರ್ಗಳಿಗೆ ಸೂಕ್ತ ವೇತನ ಭದ್ರತೆ, ವೈದ್ಯಕೀಯ ವಿಮೆ ಹಾಗೂ ಕ್ಷೇತ್ರ ಕಾರ್ಯಗಳಿಗೆ ಪ್ರಯಾಣ ಭತ್ಯೆ (TA/DA) ದೊರೆಯುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ವೇತನ ಕೇಳಿದಾಗ ಬೇರೆ ಕೆಲಸ ಹುಡುಕಿಕೊಳ್ಳುವಂತೆ ಉತ್ತರಿಸಲಾಗುತ್ತಿದೆ ಎನ್ನುವ ಆರೋಪವನ್ನು ಉಲ್ಲೇಖಿಸಿರುವ ಆರ್. ಅಶೋಕ್, ದುಡಿಯುವ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಆರ್. ಅಶೋಕ್ ಆಗ್ರಹವೇನು?
- ಏಳು ತಿಂಗಳಿನಿಂದ ಬಾಕಿ ಉಳಿದಿರುವ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು.
- ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಸಂಬಳ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು.
- ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ಇಂಜಿನಿಯರ್ಗಳಿಗೆ ವೇತನ ಭದ್ರತೆ ಕಲ್ಪಿಸಬೇಕು.
- ವೈದ್ಯಕೀಯ ವಿಮೆ ಹಾಗೂ ಕ್ಷೇತ್ರ ಕಾರ್ಯದ TA/DA ಸೌಲಭ್ಯಗಳನ್ನು ಒದಗಿಸಬೇಕು.
ದುಡಿಯುವ ನೌಕರರ ಶ್ರಮಕ್ಕೆ ಗೌರವ ನೀಡುವುದು ಮತ್ತು ಅವರ ಕುಟುಂಬಗಳ ಬದುಕಿಗೆ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ KRRDA ಇಂಜಿನಿಯರ್ಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.








