ಲಾಕ್ ಡೌನ್ ನಿಂದಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರನ್ನು ವಾಪಸ್ ಕರೆಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಯಶಸ್ವಿಯಾಗಿದ್ದಾರೆ.
ಮಾರ್ಚ್ 16ರಂದು 45 ಪ್ರವಾಸಿಗರ ತಂಡ ಕಾಶಿ ಪ್ರವಾಸಕ್ಕೆ ತೆರಳಿದ್ದು, ಮಾರ್ಚ್ 22ರಂದು ರೈಲಿನ ಮೂಲಕ ಮರಳಿ ಬರಬೇಕಾಗಿತ್ತು. ಲಾಕ್ ಡೌನ್ ಹಿನ್ನೆಲೆ ರೈಲು ಸಂಚಾರ ರದ್ದಾಗಿದ್ದು, 15 ಜನರು ವಿಮಾನದ ಮೂಲಕ ಮರಳಿದ್ದರು. ಆದರೆ ಇನ್ನುಳಿದ 30 ಜನರು ಅಲ್ಲಿಯೇ ಸಿಲುಕಿದ್ದರು.
ಈ ತಂಡಕ್ಕೆ ಪ್ರಯಾಗ್ ರಾಜ್ ನ ಜಂಗಮವಾಡಿ ಮಠದಲ್ಲಿ ವಾಸ್ತವ್ಯ ಮಾಡಿದ್ದು, ವಾಪಸ್ ಕರ್ನಾಟಕಕ್ಕೆ ಮರಳುವ ಸಲುವಾಗಿ ಹಲವರಿಗೆ ಮೊರೆಯಿಟ್ಟಿದ್ದರು. ಇದರ ಮಾಹಿತಿ ಪಡೆದ ಬಿ.ವೈ. ವಿಜಯೇಂದ್ರ ಉತ್ತರ ಪ್ರದೇಶ ಸರ್ಕಾರದ ಜತೆ ಸಂಪರ್ಕ ಸಾಧಿಸಿ ಅವರುಗಳು ವಾಪಸ್ ಬರಲು ಬಸ್ ವ್ಯವಸ್ಥೆ ಮಾಡಿಸಿದ್ದಾರೆ.








