ವಿದ್ಯುತ್ ಬಿಲ್ ಏರಿಸಲು ಮುಂದಾದ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ….
ಬೆಂಗಳೂರು: ಕರೆಂಟ್ ಮುಟ್ಟಿದ್ರೆ ಶಾಕ್ ಹೊಡಿಯುತ್ತೋ ಇಲ್ವೋ ಗೊತ್ತಿಲ್ಲ, ಕರೆಂಟ್ ಬಿಲ್ ನೋಡಿದ್ರೆ ಮಾತ್ರ ಪಕ್ಕಾ ಶಾಕ್ ಹೊಡೆಯುತ್ತೆ, ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಬೆಸ್ಕಾಂ ಕೂಡ ಶಾಕ್ ನೀಡಲು ಮುಂದಾಗಿದೆ.
ಬೇಸಿಗೆ ಕಾಲಕ್ಕೂ ಮುನ್ನವೇ ವಿದ್ಯುತ್ ದರ ಏರಿಕೆ ಮಾಡಿ ರಾಜ್ಯದ ಜನತೆಗೆ ಬೆಸ್ಕಾಂ ಶಾಕ್ ನೀಡಿದೆ. ಪ್ರತಿ ಯುನಿಟ್‌ಗೆ 1.50 ರೂಪಾಯಿ ಹೆಚ್ಚಳ ಮಾಡುವಂತೆ ಬೆಸ್ಕಾಂ ಅಧಿಕಾರಿಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC)ಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಬೆಸ್ಕಾಂ ಮಾತ್ರವಲ್ಲದೆ ಮೆಸ್ಕಾಂ, ಚೆಸ್ಕಾಂ ಕಂಪನಿಗಳು ಕೂಡ ನಷ್ಟದ ನೆಪ ಹೇಳಿ ದರ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವನ್ನ ಕೇಳಿಕೊಂಡಿದ್ದಾರೆ. ಕಳೆದ ಬಾರಿ ಪ್ರತಿ ಯುನಿಟ್‌ಗೆ 1 ರೂ. 39 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ KERC 30 ಪೈಸೆ ಮಾತ್ರ ದರ ಪರಿಷ್ಕರಣೆ ಮಾಡಿತ್ತು.
ಈಗ KERC ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎನ್ನುವುದರ ಮೇಲೆ ವಿದ್ಯುತ್ ದರದ ಏರುಪೇರಿನ ಕುರಿತು ತಿಳಿಯಲಿದೆ. ಒಂದು ವೇಳೆ ಬೆಸ್ಕಾಂ ಪ್ರಸ್ತಾವನೆಗೆ KERC ಒಪ್ಪಿಗೆ ಕೊಟ್ಟರೆ ಜನರಿಗೆ ವಿದ್ಯುತ್ ದರ ಶಾಕ್ ನೀಡುವುದಂತೂ ಗ್ಯಾರಂಟಿ.








