ಪ್ರತಿ ದಿನ ಟಿಫನ್ ಗೆ ವಿವಿಧ ಬಗೆಯ ಇಡ್ಲಿ , ದೋಸೆಗಳನ್ನ ಮಾಡಿ – ಬೋರ್ ಆಗದ ರೆಸಿಪಿಗಳು..!
ಮೊಳಕೆ ಬರಿಸಿದ ಹೆಸರು ಬೇಳೆ ದೋಸೆ
ಬೇಕಾಗುವ ಪದಾರ್ಥಗಳು
3/4 ಕಪ್ ಮೊಳಕೆ ಬರಿಸಿದ ಹೆಸರು ಬೇಳೆ
3/4 ಕಪ್ ನೆನೆಸಿದ ನವಣೆ ಅಕ್ಕಿ
1 ಇಂಚು ತಾಜಾ ಶುಂಠಿ ತುಂಡು
1-2 ಹಸಿರು ಮೆಣಸಿನಕಾಯಿಗಳು
1 ಟೀಸ್ಪೂನ್ ಜೀರಿಗೆ
ರುಚಿಗೆ ತಕ್ಕಂತೆ ಉಪ್ಪು
ತಾಜಾ ಕೊತ್ತಂಬರಿ ಸೊಪ್ಪು
ಎಣ್ಣೆ/ತುಪ್ಪ

ನವಣೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಕನಿಷ್ಠ 2-3 ಗಂಟೆಗಳ ಕಾಲ ನೆನೆಸಿಡಿ.
ನೆನೆದ ನವಣೆ ಅಕ್ಕಿಯನ್ನು ನೀರಿನಿಂದ ಸೋಸಿ. ಮಿಕ್ಸರ್ ಗೆ ನವಣೆ ಅಕ್ಕಿ, ಹೆಸರು ಕಾಳು, ಶುಂಠಿ, ಮೆಣಸಿನಕಾಯಿ, ಜೀರಿಗೆ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ರುಬ್ಬಿಕೊಳ್ಳಿ. ಸುಮಾರು 1/2 ಕಪ್ ನೀರು ಸೇರಿಸಿ ಚೆನ್ನಾಗಿ ರುಬ್ಬಿ.
ದೋಸೆ ಕಾವಲಿಯನ್ನು ಬಿಸಿ ಮಾಡಿ. ಕಾದಾಗ ಸ್ವಲ್ಪ ಎಣ್ಣೆ/ತುಪ್ಪ ಹಾಕಿ
ನಂತರ ರುಬ್ಬಿಕೊಂಡ ಹಿಟ್ಟನ್ನು ತೆಗೆದುಕೊಂಡು, ಕಾವಲಿ ಮೇಲೆ ಬಿಡಿ. ವೃತ್ತಾಕಾರದಲ್ಲಿ ಹರಡಿ.
ಎಣ್ಣೆಯನ್ನು ಚಿಮುಕಿಸಿ, ಎರಡು ಬದಿಗಳನ್ನು ಬೇಯಿಸಿ.
ನಿಮಗಿಷ್ಟವಾದ ಚಟ್ನಿಯೊಂದಿಗೆ ಬಿಸಿಯಾಗಿ ನವಣೆ ಅಕ್ಕಿ ಹೆಸರು ಬೇಳೆ ದೋಸೆ ಸೇವಿಸಿ .
ಇದು ರುಚಿಕರವಾದ ಮತ್ತು ಎಲ್ಲಾ ವಯಸ್ಸಿನವರಿಗೆ ಆರೋಗ್ಯಕರ ಉಪಹಾರವಾಗಿದೆ.
ಬಟಾಣಿ ರವೆ ಇಡ್ಲಿ
ಬೇಕಾಗುವ ಸಾಮಗ್ರಿಗಳು
ಬಟಾಣಿ – 1ಕಪ್
ಸಾಸಿವೆ – 1 ಚಮಚ
ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು ಸ್ವಲ್ಪ
ಸಣ್ಣಗೆ ಕತ್ತರಿಸಿದ ಈರುಳ್ಳಿ 2
ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ – 6
ಚಿರೋಟಿ ರವೆ -1 ಕಪ್
ಗಟ್ಟಿ ಮೊಸರು – 1 ಕಪ್
ತುರಿದ ಕ್ಯಾರೆಟ್ – 1/2ಕಪ್
ಶುಂಠಿ – 1 ಇಂಚು
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ನೀರು Saakshatv cooking recipes Rava idli

ಮಾಡುವ ವಿಧಾನ
ಮೊದಲಿಗೆ ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬಳಿಕ ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಚಿರೋಟಿ ರವೆ ಸೇರಿಸಿ ಕೆಂಪಗಾಗುವವರೆಗೆ ಚೆನ್ನಾಗಿ ಹುರಿಯಿರಿ.

ಈಗ ಅದಕ್ಕೆ ಕ್ಯಾರೆಟ್, ಸಣ್ಣಗೆ ತುರಿದ ಶುಂಠಿ, ಬೇಯಿಸಿದ ಬಟಾಣಿ, ಗಟ್ಟಿ ಮೊಸರು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. 20 ನಿಮಿಷ ಹಾಗೆಯೇ ಬಿಡಿ. ಬಳಿಕ ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಿ. ಈಗ ರುಚಿಕರವಾದ ಬಟಾಣಿ ರವೆ ಇಡ್ಲಿ ಸವಿಯಲು ರೆಡಿ.
ಇನ್’ಸ್ಟಂಟ್ (instant) ಸಬ್ಬಕ್ಕಿ /ಸಾಬುದಾನ /ಸಾಗು ಇಡ್ಲಿ
ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ/ಸಾಗು/ಸಾಬುದಾನ – 1 ಕಪ್
ಮೊಸರು – 1 ಕಪ್
ಇಡ್ಲಿ ರವೆ ಅಥವಾ ಅಕ್ಕಿ ರವೆ – 1/2 ಕಪ್
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಸಬ್ಬಕ್ಕಿ/ಸಾಗು/ಸಾಬುದಾನವನ್ನು ನೀರಿನಲ್ಲಿ ತೊಳೆದು ನೀರು ಸೋಸಿ ಮೂರು ಗಂಟೆ ಕಾಲ ಹಾಗೆಯೇ ಬಿಡಿ. ಇಡ್ಲಿ ರವೆ/ಅಕ್ಕಿ ರವೆಯನ್ನು ನೀರಿನಲ್ಲಿ ತೊಳೆದು ನೀರು ಸೋಸಿ ಅರ್ಧ ಗಂಟೆ ಹಾಗೆಯೇ ಬಿಡಿ..

ನಂತರ ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ ನೆನೆಸಿದ ಸಬ್ಬಕ್ಕಿ, ರವೆಯನ್ನು ಸೇರಿಸಿ, ಮೊಸರನ್ನು ಹಾಕಿ ಚೆನ್ನಾಗಿ ಕಲಸಿ. ಬಳಿಕ ಈ ಮಿಶ್ರಣಕ್ಕೆ ಉಪ್ಪು ಹಾಕಿ, ಅಗತ್ಯವಿದ್ದರೆ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅರ್ಧ ಗಂಟೆ ಕಳೆದ ಬಳಿಕ ಇಡ್ಲಿ ತಟ್ಟೆಗೆ ಎಣ್ಣೆ ಹಚ್ಚಿ ಹಿಟ್ಟನ್ನು ಹಾಕಿ ಹಬೆಯಲ್ಲಿ ಸುಮಾರು ಇಪ್ಪತ್ತು ನಿಮಿಷ ಬೇಯಿಸಿ. ತುಂಬಾ ರುಚಿಕರವಾದ ಆರೋಗ್ಯಕರ ಇಡ್ಲಿ ಚಟ್ನಿಯೊಂದಿಗೆ ಸವಿಯಲು ಸಿದ್ಧ.
ಧಿಡೀರ್ (instant) ಅವಲಕ್ಕಿ ಉತ್ತಪ್ಪ
ಬೇಕಾಗುವ ಸಾಮಗ್ರಿಗಳು :
ಅವಲಕ್ಕಿ 1/2 ಕಪ್
ಮೊಸರು 1/2 ಕಪ್
ರವೆ 1/2 ಕಪ್
ಚಿಕ್ಕದಾಗಿ ಕತ್ತರಿಸಿದ ತರಕಾರಿಗಳು (ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್, ಹಸಿಮೆಣಸು, ಬೀನ್ಸ್)
ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ

ಮಾಡುವ ವಿಧಾನ :
ಮೊದಲಿಗೆ ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ. ಬಳಿಕ ನೆನೆದ ಅವಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ರವೆ, ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ಉಪ್ಪು ಸೇರಿಸಿ 20 ನಿಮಿಷ ಹಾಗೆ ಬಿಡಿ.

ಇನ್ನೊಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ತರಕಾರಿಗಳಿಗೆ ಸ್ವಲ್ಪ ಉಪ್ಪು ಹಾಕಿ ಮಿಶ್ರ ಮಾಡಿ ಪಕ್ಕದಲ್ಲಿ ಇಟ್ಟುಕೊಳ್ಳಿ. ನಂತರ ದೋಸೆ ಕಾವಲಿಯನ್ನು ಬಿಸಿ ಮಾಡಿ. ಮಾಡಿಟ್ಟುಕೊಂಡ ಅವಲಕ್ಕಿ ಹಿಟ್ಟನ್ನು ಕಾವಲಿ ಮೇಲೆ ದೋಸೆಯಂತೆ ಹುಯ್ಯಿರಿ. ಬಳಿಕ ದೋಸೆ ಮೇಲೆ ಹೆಚ್ಚಿಟ್ಟುಕೊಂಡ ತರಕಾರಿಯನ್ನು ಉದುರಿಸಿ. ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ರುಚಿಯಾದ ಅವಲಕ್ಕಿ ಉತ್ತಪ್ಪ ಸವಿಯಲು ರೆಡಿ.
ನೀರು ದೋಸೆ
ಬೇಕಾಗುವ ಸಾಮಗ್ರಿಗಳು
2 ಕಪ್ ದೋಸೆ ಅಕ್ಕಿ
1 ಕಪ್ ತೆಂಗಿನಕಾಯಿ ತುರಿ
ರುಚಿಗೆ ತಕ್ಕಷ್ಟು ಉಪ್ಪು
ನೀರು

ಮಾಡುವ ವಿಧಾನ
1. ಮೊದಲಿಗೆ ದೋಸೆ ಅಕ್ಕಿಯನ್ನು ತೊಳೆದು 2 ರಿಂದ 3 ಗಂಟೆಗಳ ಕಾಲ ನೆನೆಸಿ.
2. ನಂತರ ಮಿಕ್ಸಿ ಜಾರಿನಲ್ಲಿ ಅಕ್ಕಿ, ತೆಂಗಿನಕಾಯಿ ತುರಿ , ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಾಕಷ್ಟು ನೀರನ್ನು ಸೇರಿಸಿ ನಯವಾಗಿ ಅರೆಯಿರಿ.
3. ಬಳಿಕ ಹಿಟ್ಟನ್ನು ಪಾತ್ರೆಯಲ್ಲಿ ಹಾಕಿ, ಅದು ಹಾಲಿನಂತೆ ತೆಳ್ಳಗಾಗುವಷ್ಟು ನೀರು ಸೇರಿಸಿ.

4. ದೋಸೆ ಕಾವಲಿಯನ್ನು ಬಿಸಿ ಮಾಡಿ, ಎಣ್ಣೆ ಹಚ್ಚಿ, ಅದರ ಮೇಲೆ ಹಿಟ್ಟನ್ನು ಚೆಲ್ಲಿದಂತೆ ಹರಡಿ. ಒಂದು ಬದಿಯನ್ನು ಬೇಯಿಸಿ ಎರಡು ಪದರ ಮಾಡಿ ತೆಗೆಯಿರಿ.
ಬಿಸಿ ಬಿಸಿಯಾದ ನೀರು ದೋಸೆಯನ್ನು ಚಟ್ನಿ ಅಥವಾ ರಸಾಯನದೊಂದಿಗೆ ಸವಿಯಿರಿ.
ಧಿಡೀರ್ (instant) ಟೊಮೆಟೊ ದೋಸೆ
ಬೇಕಾಗುವ ಪದಾರ್ಥಗಳು
1 ಕಪ್ ಅಕ್ಕಿ
1 ಟೀಸ್ಪೂನ್ ಉದ್ದಿನ ಬೇಳೆ
3 ಟೊಮೆಟೊ
1/2 ಕ್ಯಾರೆಟ್
3 ಒಣಗಿದ ಕೆಂಪು ಮೆಣಸು
8 ಕರಿಬೇವಿನ ಎಲೆಗಳು
1/2 ಇಂಚು ಶುಂಠಿ
3 ಟೀಸ್ಪೂನ್ ತೆಂಗಿನಕಾಯಿ ತುರಿ
ರುಚಿಗೆ ತಕ್ಕಷ್ಟು ಉಪ್ಪು
1/4 ಚಮಚ ಜೀರಿಗೆ
2 ಟೀಸ್ಪೂನ್ ಅಡುಗೆ ಎಣ್ಣೆ

ಮಾಡುವ ವಿಧಾನ
ಮೊದಲು ಅಕ್ಕಿ ಮತ್ತು ಬೇಳೆಯನ್ನು ತೊಳೆದು 3 ಗಂಟೆಗಳ ಕಾಲ ನೆನೆಸಿಡಿ. ನಂತರ ಎಲ್ಲಾ ತರಕಾರಿಗಳನ್ನು ಕತ್ತರಿಸಿ ( ಒಣಗಿದ ಕೆಂಪು ಮೆಣಸಿನಕಾಯಿ ಇಲ್ಲದಿದ್ದರೆ 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ ಬಳಸಿ)
ಮೊದಲು ಎಲ್ಲಾ ತರಕಾರಿಗಳು ಮತ್ತು ತೆಂಗಿನಕಾಯಿ ತುರಿಯನ್ನು ನೀರು ಸೇರಿಸದೆ ರುಬ್ಬಿ.
ಇದಕ್ಕೆ ಅಕ್ಕಿ, ಬೇಳೆ ಮತ್ತು ಸ್ವಲ್ಪ ನೀರು ಸೇರಿಸಿ ಮತ್ತೆ ಚೆನ್ನಾಗಿ ರುಬ್ಬಿ.
ನಂತರ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಉಪ್ಪು ಮತ್ತು ಜೀರಿಗೆ ಸೇರಿಸಿ. 30 ನಿಮಿಷಗಳ ಕಾಲ ಹಿಟ್ಟನ್ನು ಹಾಗೆಯೇ ಇಡಿ.
ಬಳಿಕ ದೋಸೆ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ಹಾಕಿ ವೃತ್ತಾಕಾರವಾಗಿ ಹರಡಿ. ಮಧ್ಯಮ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ.
ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆಯನ್ನು ಚಿಮುಕಿಸಿ. ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ ತೆಗೆಯಿರಿ.
ತೆಂಗಿನಕಾಯಿ ಚಟ್ನಿ ಅಥವಾ ಪುದೀನ ಚಟ್ನಿಯೊಂದಿಗೆ ಬಿಸಿಯಾದ ದೋಸೆಯನ್ನು ಸವಿಯಿರಿ.
ಮಸಾಲೆ ಪೋಡಿ ಇಡ್ಲಿ
ಬೇಕಾಗುವ ಸಾಮಗ್ರಿಗಳು
ಉಳಿದ ಇಡ್ಲಿಗಳು
ಕೆಂಪು ಮೆಣಸು -5
ಕಡ್ಲೆಬೇಳೆ – 1/4 ಕಪ್
ಉದ್ದಿನಬೇಳೆ -1/4 ಕಪ್
ಅಕ್ಕಿ -1 ಚಮಚ
ಎಳ್ಳು -1 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಒಂದು ಕಡಾಯಿ ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ನಂತರ ಕೆಂಪು ಮೆಣಸು, ಕಡ್ಲೆಬೇಳೆ, ಉದ್ದಿನಬೇಳೆ, ಅಕ್ಕಿ, ಎಳ್ಳು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಇದನ್ನು ತಣ್ಣಗಾಗಿಸಿ.
ಬಳಿಕ ಮಿಕ್ಸರ್ ಜಾರ್ ಗೆ ಇದನ್ನು ಹಾಕಿ, ಸ್ವಲ್ಪ ಇಂಗು ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಹುಡಿ ಮಾಡಿ.
ನಂತರ ತವಾ ಬಿಸಿ ಮಾಡಿ ಸ್ವಲ್ಪ ತುಪ್ಪ ಸವರಿ. ಇಡ್ಲಿಯ ಎರಡೂ ಬದಿಗಳನ್ನು ಅರ್ಧ ನಿಮಿಷ ಹುರಿಯಿರಿ. ನಂತರ ರುಬ್ಬಿದ ಪುಡಿಯನ್ನು ಸೇರಿಸಿ. ಇಡ್ಲಿಗೆ ಮಸಾಲೆ ಹುಡಿಯನ್ನು ಚೆನ್ನಾಗಿ ಬೆರೆಸಿ. ಈಗ ಮಸಾಲೆ ಪೋಡಿ ಇಡ್ಲಿ ಸವಿಯಲು ಸಿದ್ಧವಾಗಿದೆ. ಇದನ್ನು ಬಿಸಿಯಾಗಿ ಬೆಳಿಗ್ಗೆಯ ಬ್ರೇಕ್ ಫಾಸ್ಟ್ ಆಗಿ ಅಥವಾ ಸಂಜೆಯ ಸ್ಯಾಕ್ಸ್ ಆಗಿ ಸೇವಿಸಬಹುದು.
ವೆಜಿಟೇಬಲ್ ದೋಸೆ
ಬೇಕಾಗುವ ಸಾಮಾಗ್ರಿಗಳು
ದೋಸೆ ಅಕ್ಕಿ – 1 ಕಪ್
ಉದ್ದಿನಬೇಳೆ – 1/4 ಕಪ್
ಬೇಯಿಸಿದ ಆಲೂಗಡ್ಡೆ – 1
ಮೊಸರು – 1 ಕಪ್
ಈರುಳ್ಳಿ – 1
ಟೊಮೆಟೋ – 1
ಕ್ಯಾರೆಟ್ – 1
ಸೋಡಾ ಹುಡಿ – ಚಿಟಿಕೆಯಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು
ಅಗತ್ಯವಿರುವಷ್ಟು ನೀರು

ಮಾಡುವ ವಿಧಾನ
ಮೊದಲಿಗೆ ಅಕ್ಕಿ ಮತ್ತು ಉದ್ದಿನಬೇಳೆಯನ್ನು 3 – 4 ಗಂಟೆಗಳ ಕಾಲ ನೆನೆ ಹಾಕಿ. ನಂತರ ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣಕ್ಕೆ ಉಪ್ಪು, ಸೋಡಾ ಹುಡಿ, ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಟೊಮೆಟೋ, ತುರಿದ ಕ್ಯಾರೆಟ್, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವು ಸೇರಿಸಿ ಚೆನ್ನಾಗಿ ಕಲಸಿ. ಅಗತ್ಯವಿರುವಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ನಂತರ ತವಾವನ್ನು ಬಿಸಿ ಮಾಡಿ ದೋಸೆ ಹಿಟ್ಟನ್ನು ಹುಯ್ಯಿರಿ. ಎಣ್ಣೆ ಹಾಕಿ ಎರಡೂ ಬದಿಗಳನ್ನು ಹೊಂಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ ತೆಗೆಯಿರಿ. ಕಾಯಿ ಚಟ್ನಿ ಜೊತೆ ವೆಜಿಟೇಬಲ್ ದೋಸೆ ಸವಿಯಿರಿ.
ಮೆಂತೆ ಸೊಪ್ಪಿನ ದೋಸೆ
ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ – 2 ಕಪ್
ಉದ್ದಿನಬೇಳೆ – 1/2 ಕಪ್
ಮೆಂತೆ – 1 ಚಮಚ
ಮೆಂತೆ ಸೊಪ್ಪು – 1 ಕಟ್ಟು
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ

ಮೊದಲಿಗೆ ದೋಸೆ ಅಕ್ಕಿ, ಮೆಂತೆಯನ್ನು ತೊಳೆದು 4 ಗಂಟೆಗಳ ಕಾಲ ನೀರಲ್ಲಿ ನೆನೆಸಿಡಿ. ಉದ್ದಿನಬೇಳೆಯನ್ನು ಸಾಕಷ್ಟು ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿಡಿ. ನೀರನ್ನು ಸೋಸಿ ದೋಸೆ ಅಕ್ಕಿ ಮತ್ತು ಮೆಂತೆ ಹಾಗೂ ಉದ್ದಿನಬೇಳೆಯನ್ನು ಚೆನ್ನಾಗಿ ರುಬ್ಬಿ. ರಾತ್ರಿಯಿಡೀ ಹುದುಗಲು ಬಿಡಿ. ಮರುದಿನ ಬೆಳಗ್ಗೆ ಹಿಟ್ಟಿಗೆ ಉಪ್ಪು ಸೇರಿಸಿ ಕಲಸಿ. ಮೆಂತೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸೇರಿಸಿ.
ದೋಸೆ ತವಾಗೆ ಎಣ್ಣೆ ಸವರಿ ದೋಸೆ ಹಿಟ್ಟನ್ನು ಹೊಯ್ದು ವೃತ್ತಾಕಾರವಾಗಿ ಹರಡಿ. ಬಿಸಿಯಾದ ಗರಿಗರಿ ದೋಸೆಯನ್ನು ಚಟ್ನಿ ಜೊತೆಗೆ ಸವಿಯಿರಿ.







