ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂಗೆ ಮಿಶ್ರ ಪ್ರತಿಕ್ರಿಯೆ
ಬೆಂಕಳೂರು: ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂಗೆ ರಾಜ್ಯದ ಹಲವೆಡೆ ಎರಡನೇ ದಿನ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜನರು ಬೇಕಾಬಿಟ್ಟಿ ಓಡಾಡುವ ಹಾಗೆ ಕೆಲವು ಜಿಲ್ಲೆಗಳಲ್ಲಿ ಕರ್ಪ್ಯೂ ನಿಯಮ ಪಾಲಿಸುತ್ತಿದ್ದಾರೆ.
ಹುಬ್ಬಳ್ಳಿಯ ಪ್ರಸಿದ್ಧ ಮೀನು ಮಾರುಕಟ್ಟೆ ಜನರಿಲ್ಲದೆ ಗೊಣಗೂಡುತ್ತಿದೆ. ಪ್ರತಿ ರವಿವಾರ ಗ್ರಾಹಕರಿಂದ ಗಿಜುಗುಡುತ್ತಿದ್ದ ಮಾರುಕಟ್ಟೆ, ಈಗ ಕರ್ಫ್ಯೂ ಹಿನ್ನೆಲೆ ಮಾಂಸ ಪ್ರಿಯರು ಮಾರುಕಟ್ಟೆಯತ್ತ ಬಾರದಿದ್ದರಿಂದ ಸ್ತಬ್ಧವಾಗಿದೆ. ಆದರೆ ವಿಜಯಪುರದಲ್ಲಿ ಮಾಸ್ಕ್ ಇಲ್ಲದೇ ಜನರು ಮಾರ್ಕೆಟ್ ನತ್ತ ಬರುತ್ತಿದ್ದಾರೆ. ಮತ್ತು ಮಾಸ್ಕ್ ಇಲ್ಲದೆ ಗಾಂಧಿ ಸರ್ಕಲ್ ಹಾಗೂ ಇನ್ನಿತರ ಕಡೆ ರಸ್ತೆಗಿಳಿದ ವಾಹನ ಸವಾರರಿಗೆ 250 ರೂಪಾಯಿ ದಂಡ ಹಾಕುವ ಮೂಲಕ ಜಿಲ್ಲಾ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಇನ್ನು ಬಾಗಲಕೋಟೆಯಲ್ಲಿ ಕರ್ಪ್ಯೂಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ನಗರದ ಹಳೆ ಮಾರುಕಟ್ಟೆ ಪ್ರದೇಶದಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ. ಸ್ವಯಂ ಪ್ರೇರಿತರಾಗಿ ವ್ಯಾಪಾರಸ್ಥರು ಅಂಗಡಿ ಮುಗ್ಗಟ್ಟುಗಳನ್ನ ಬಂದ್ ಮಾಡಿದ್ದಾರೆ. ಅಲ್ಲಲ್ಲಿ ಬೆರಳೆಣಿಕೆಯಷ್ಟು ಜನರು ಓಡಾಡುತ್ತಿದ್ದಾರೆ. ಧಾರವಾಡದಲ್ಲೂ ಕೂಡಾ ಇದೇ ವಾತಾವರಣ ಸೃಷ್ಟಿಯಾಗಿದೆ. ಆದರೆ ಬಳ್ಳಾರಿಯ ಕೌಲ್ ಬಜಾರ್ ಮಟನ್ ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದಿದ್ದಾರೆ. ಜನ ವೀಕೆಂಡ್ ಕರ್ಪ್ಯೂಗೆ ಡೋಂಟ್ ಕೇರ್ ಎಂದಿದ್ದಾರೆ. ಸಾಮಾಜಿಕ ಅಂತರ ಕಾಪಾಡದೆ ನಿರ್ಲಕ್ಷ್ಯ ಮೆರೆದಿದ್ದಾರೆ.
ಹಾಗೇ ಕೊಡಗಿನಲ್ಲಿ ವೀಕೆಂಡ್ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ ದೊರಕಿದೆ. ಮುಂಜಾನೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಖರೀದಿಸಲು ಜನರು ಪಟ್ಟಣದತ್ತ ಮುಖ ಮಾಡಿದ್ದು, ಸದ್ಯ ವಾಹನಗಳ ಓಡಾಟ ಕಡಿಮೆಯಾಗಿದೆ. ಇನ್ನು ರಾಯಚೂರು ಸ್ತಬ್ಧವಾಗಿದೆ. ಬೇಕಾಬಿಟ್ಟಿ ಓಡಾಡುವವರಿಗೆ ಪೊಲೀಸರು ಲಾಠಿ ತೋರಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಚಿತ್ರದುರ್ಗ ನಗರದಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗಿವೆ. ಗಾಂಧಿವೃತ್ತದ ಬಳಿಯ ಅಂಗಡಿಗಳು ಸಂಪೂರ್ಣ ಬಂದ್ ಆಗಿವೆ. ನಗರದ ಮುಖ್ಯ ರಸ್ತೆಗಳು ಬಿಕೊ ಎನ್ನುತ್ತಿವೆ.








