ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವದ ಸಂಘರ್ಷ ಮತ್ತು ಆಂತರಿಕ ಭಿನ್ನಮತ ಈಗ ಹೊಸ ರೂಪ ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ನನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕಿಕ್ ಔಟ್ ಮಾಡಿ ಎನ್ನಲು ನಾನೇನು ತಪ್ಪು ಮಾಡಿದ್ದೆ ಎಂದು ವಿಜಯೇಂದ್ರ ಅವರು ದೆಹಲಿ ನಾಯಕರ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ವೈರಲ್ ಆಗಿರುವ ಆಡಿಯೋದಲ್ಲಿ ಸದಾನಂದ ಗೌಡರು ದೆಹಲಿಯ ಪ್ರತಿನಿಧಿಯೊಬ್ಬರ ಜೊತೆ ಮಾತನಾಡುತ್ತಾ ಅಕ್ಟೋಬರ್ ತಿಂಗಳಿನಲ್ಲಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಮಾತುಗಳು ಬಿಜೆಪಿಯೊಳಗೆ ದೊಡ್ಡ ಮಟ್ಟದ ಬಿರುಗಾಳಿಯನ್ನೇ ಎಬ್ಬಿಸಿವೆ. ಪಕ್ಷದ ಹಿರಿಯ ನಾಯಕರಿಂದ ಇಂತಹ ಕಟು ಮಾತುಗಳನ್ನು ನಿರೀಕ್ಷಿಸಿರದ ವಿಜಯೇಂದ್ರ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಆಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಸದಾನಂದ ಗೌಡರು ಅದು ನನ್ನ ಧ್ವನಿಯಲ್ಲ ನನ್ನ ಹೆಸರನ್ನು ಕೆಡಿಸಲು ಯಾರೋ ಮಾಡಿರುವ ಪಿತೂರಿ ಇದು ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಸಂಬಂಧ ಹೈಕಮಾಂಡ್ ನಾಯಕರಿಗೆ ಸ್ಪಷ್ಟನೆ ನೀಡಲು ಅವರು ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ವಿಜಯೇಂದ್ರ ಮಾತ್ರ ಈ ಬೆಳವಣಿಗೆಯಿಂದ ಭಾರಿ ಬೇಸರಗೊಂಡಿದ್ದು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವಾಗ ಇಂತಹ ಅಪಪ್ರಚಾರಗಳು ಮತ್ತು ಹಿರಿಯ ನಾಯಕರ ವಿರೋಧ ನನ್ನನ್ನು ಕುಗ್ಗಿಸಿದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ಹಿರಿಯ ಮತ್ತು ಕಿರಿಯ ನಾಯಕರ ನಡುವಿನ ಈ ಸಂಘರ್ಷ ಈಗ ದೆಹಲಿ ಅಂಗಳಕ್ಕೆ ತಲುಪಿದೆ. ಆಡಿಯೋ ಅಸಲಿಯೇ ಅಥವಾ ನಕಲಿಯೇ ಎಂಬ ಚರ್ಚೆಯ ನಡುವೆಯೇ ಪಕ್ಷದ ಒಳಜಗಳ ಮತ್ತೊಮ್ಮೆ ಬೀದಿಗೆ ಬಂದಂತಾಗಿದೆ. ಹೈಕಮಾಂಡ್ ಈ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಮತ್ತು ವಿಜಯೇಂದ್ರ ಅವರ ಬೇಸರವನ್ನು ಹೇಗೆ ತಣಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.








