ಕೊರೊನಾ ಅಪ್ ಡೇಟ್.. ಚೆನ್ನೈಗೆ ಧೋನಿ ಗುಡ್ ಬೈ.. ಓದಿ ದಿನದ TOP 10 NEWS
ಭಾರತದಲ್ಲಿ ಕೊರೊನಾ ಸೋಂಕಿನ ಅಬ್ಬರ ಮುಂದುವೆರೆದಿದ್ದು, ಕಳೆದ 24 ಗಂಟೆಯಲ್ಲಿ 2,58,089 ಸೋಂಕಿತರು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 385 ಮಂದಿ ಹೆಮ್ಮಾರಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ. ನಿನ್ನೆ ದೇಶದಲ್ಲಿ 1,51,740 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ ಒಟ್ಟು 16,56,341 ಸಕ್ರಿಯ ಪ್ರಕರಣಗಳು ಇವೆ.
ಇವತ್ತು ಬೆಂಗಳೂರು ನಗರದಲ್ಲಿ 18,622 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಇವತ್ತು ಬೊಮ್ಮನಹಳ್ಳಿ ವಲಯದಲ್ಲಿ 1,759, ದಾಸರಹಳ್ಳಿ 467, ಬೆಂಗಳೂರು ಪೂರ್ವ 3,046 , ಮಹದೇವಪುರ 2,733, ಆರ್ ಆರ್‌ನಗರ 1,269, ದಕ್ಷಿಣ ವಲಯ 2,538, ಪಶ್ಚಿಮ 1,891, ಯಲಹಂಕ 1,669, ಅನೇಕಲ್ 819, ಬೆಂಗಳೂರು ಹೊರವಲಯ 1,446 ಸೇರಿ ಒಟ್ಟು 18,622 ಪಾಸಿಟಿವ್ ದೃಢಪಟ್ಟಿವೆ.
ಕೊರೊನಾ ಸೋಂಕಿಗೆ ಕಡಿವಾಣ ಹಾಕುವಲ್ಲಿ ಈ ಹಿಂದೆ ಬೆಂಗಳೂರಿನಲ್ಲಿ ಜಾರಿ ಮಾಡಲಾಗಿರುವ 144 ಸೆಕ್ಷನ್ನ ಜನವರಿ 31ರವರೆಗೂ ವಿಸ್ತರಿಸಲಾಗಿದೆ. ಜನವರಿ 31ರವರೆಗೂ 144 ಸೆಕ್ಷನ್ ವಿಸ್ತರಿಸಿ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮದ ಎಚ್ಚರಿಕೆಯೂ ನೀಡಿದ್ದಾರೆ. ಇದಲ್ಲದೆ ರಾತ್ರಿ ನಿಷೇಧಾಜ್ಞೆ ಹಾಗೂ ವಾರಾಂತ್ಯದ ಕರ್ಫ್ಯೂ ಕೂಡ ವಿಸ್ತರಿಸಲಾಗಿದೆ.
ಕರೋನಾ ಸಾಂಕ್ರಾಮಿಕ ಕಾಲದಲ್ಲಿ ಬಡವರು ಆಹಾರಕ್ಕಾಗಿ, ಬಟ್ಟೆಗಾಗಿ ಸಂಕಷ್ಟ ಪಡುತ್ತಿದ್ದಾರೆ. ಮತ್ತೊಂದೆಡೆ, ಇದೇ ಅವಧಿಯಲ್ಲಿ ದೇಶದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಬಡವ ಶ್ರೀಮಂತರ ಅಂತರ ಕರೋನಾ ಕಾಲದಲ್ಲಿ ಏರಿಕೆಯಾಗಿದೆ. ಎನ್‌ಜಿಒ ಆಕ್ಸ್‌ಫ್ಯಾಮ್ ಇಂಡಿಯಾದ ವರದಿಯ ಪ್ರಕಾರ, 2021 ರಲ್ಲಿ ಭಾರತದಲ್ಲಿ ಶೇಕಡಾ 84 ರಷ್ಟು ಕುಟುಂಬಗಳ ಆದಾಯವು ಕುಸಿದಿದೆ. ಆದರೆ ಭಾರತೀಯ ಬಿಲಿಯನೇರ್‌ಗಳ ಸಂಖ್ಯೆ 102 ರಿಂದ 142 ಕ್ಕೆ ಏರಿದೆ.

ದೇಶದಲ್ಲಿ 15-17 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು ಪರಿಚಯಿಸಿದ ನಂತರ, ಈಗ 12-14 ವರ್ಷದ ಮಕ್ಕಳಿಗೂ ಕರೋನಾ ಲಸಿಕೆ ನೀಡಲಾಗುವುದು ಎಂದು ಕೋವಿಡ್-19 ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮುಖ್ಯಸ್ಥ ಡಾ. ಎನ್‌ಕೆ ಅರೋರಾ ಹೇಳಿದ್ದಾರೆ. 12 ರಿಂದ 14 ವರ್ಷದೊಳಗಿನ ಈ ಮಕ್ಕಳಿಗೆ ಮಾರ್ಚ್ ತಿಂಗಳಿನಿಂದ ಲಸಿಕೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.
ಸ್ಯಾಂಡಲ್ವುಡ್ ನಲ್ಲಿ ಮರಿ ಟೈಗರ್ ಎಂದೆ ಗುರುತಿಸಿಕೊಂಡಿರುವ ವಿನೋದ್ ಪ್ರಭಾಕರ್ ಹೊಸದೊಂದು ಸಾಹಸಕ್ಕೆ ಕೈಹಾಕಿದ್ದಾರೆ. ನಟನೆಯ ಜೊತೆ ನಿರ್ಮಾಣದ ಸಾಹಸಕ್ಕೂ ಕೈ ಹಾಕಿರುವ ವಿನೋದ್ “ಟೈಗರ್ ಟಾಕಿಸ್” ಎನ್ನುವ ಸಂಸ್ಥೆಯನ್ನ ಹುಟ್ಟುಹಾಕಿದ್ದಾರೆ. ಈ ಸಂಸ್ಥೆಗೆ ಪತ್ನಿ ನಿಶಾ ಪ್ರಭಾಕರ್ ನಿರ್ಮಾಪಕಿಯಾಗಿದ್ದಾರೆ.
ನಟ ಕಮಲ್ ಹಾಸನ್ ನಡೆಸಿಕೊಳ್ಳುವ ತಮಿಳಿನ ಬಿಗ್ ಬಾಸ್ 5ನೇ ಸೀಜನ್ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈ ಭಾರಿಯ ವಿನ್ನರ್ ಆಗಿ ರಾಜು ಜಯಮೋಹನ್ ಹೊರಹೊಮ್ಮಿದ್ದಾರೆ.
ವಿಶ್ವ ಮಿಸೆಸ್ ಇಂಡಿಯಾ ಸ್ಪರ್ದೆಯಲ್ಲಿ ಭಾರತೀಯ ಸ್ಪರ್ಧಿ ನವದೀಪ್ ಕೌರ್ ಅವರು ಅತ್ಯುತ್ತಮ ರಾಷ್ಟ್ರೀಯ ಧಿರಿಸು ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. ಒಡಿಶಾ ಮೂಲದ ನವದೀಪ್ ಕೌರ್ ಈಗಾಗಲೇ ಒಂದು ಭಾರಿ ಮಿಸೆಸ್ ವರ್ಲ್ಡ್ ಪ್ರಶಸ್ತಿಯನ್ನ ಗೆದ್ದಿದ್ದಾರೆ.
ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರಂತೆ. ಅವರ ಸ್ಥಾನಕ್ಕೆ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾಗೂ ಚೆನ್ನೈನ ಹಿರಿಯ ಆಟಗಾರ ರವೀಂದ್ರ ಜಡೇಜಾ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಬರಲಿದೆಯಂತೆ. ತಮ್ಮ ಬಳಿಕ ಜಡೇಜಾ ಸಿಎಸ್ ಕೆ ತಂಡದ ನಾಯಕರಾಗಲು ಸೂಕ್ತ ಎಂದು ಎಂಎಸ್ ಧೋನಿ ಫ್ರಾಂಚೈಸಿಗೆ ತಿಳಿಸಿದ್ದಾರಂತೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ಯಾಪ್ಟನ್ಸಿ ಬಿಟ್ಟ ಮೇಲೆ ಮುಂದಿನ ಕ್ಯಾಪ್ಟನ್ ಯಾರು ಅನ್ನುವ ಚರ್ಚೆ ಜೋರಾಗಿದೆ. ಏಕದಿನ ಮತ್ತು ಟಿ20 ತಂಡಕ್ಕೆ ರೋಹಿತ್ ಶರ್ಮಾ ನಾಯಕನಾಗಿದ್ದಾರೆ. ಆದರೆ ಟೆಸ್ಟ್ ತಂಡದ ನಾಯಕ ಯಾರು ಅನ್ನುವ ಬಗ್ಗೆ ಮಾತ್ರ ಹೆಚ್ಚು ಕುತೂಹಲವಿದೆ. ರೋಹಿತ್ ಮತ್ತು ರಾಹುಲ್ ಹಾಟ್ ಫೆವರೀಟ್ ಆದರೂ ರಿಷಬ್ ಪಂತ್ ಅಚ್ಚರಿ ಆಯ್ಕೆ ಆದರೂ ಹುಬ್ಬೇರಿಸಬೇಕಿಲ್ಲ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್, ಸುನಿಲ್ ಗವಾಸ್ಕರ್ ಪಂತ್ ಪರ ಬ್ಯಾಟ್ ಬೀಸಿದ್ದಾರೆ.









