ಬೆಂಗಳೂರು, ಮೇ 18: ರಂಜಾನ್ ನಮಾಜ್ ಗೆ ಈದ್ಗಾ ಮೈದಾನದಲ್ಲಿ ಅನುಮತಿ ಕೊಡಿ ಎಂಬ ಸಿ. ಎಂ. ಇಬ್ರಾಹಿಂ ಅವರ ಹೇಳಿಕೆಗೆ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.
ಹಿರಿಯ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ರಂಜಾನ್ ಆಚರಣೆಗೆ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಮಾಡಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ವೇದಿಕೆಯ ಅಧ್ಯಕ್ಷ ಸಮಿಉಲ್ಲಾಖಾನ್ ಅವರು, ಇಬ್ರಾಹಿಂ ಅವರ ಪತ್ರ ಓದಿ ಏಕಕಾಲಕ್ಕೆ ಅಚ್ಚರಿ ಮತ್ತು ದಿಗ್ಭ್ರಮೆ ಉಂಟಾಯಿತು. ಒಬ್ಬ ಹಿರಿಯ ನಾಯಕರಾಗಿ, ಸಮಾಜದ ಏಳಿಗೆ ಬಯಸುವವರಾಗಿ ಅವರು ಇಂತಹ ಪತ್ರ ಬರೆಯಬಾರದಿತ್ತು ಎಂದು ಹೇಳಿದ್ದಾರೆ.
ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡುವ ಸನ್ನಿವೇಶ ಒದಗಿದರೆ, ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ ಎನ್ನುವುದು ಎಲ್ಲಾ ಮುಸ್ಲಿಮರಿಗೂ ಗೊತ್ತಿದೆ. ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ದೃಷ್ಟಿಯಲ್ಲಿ ಈಗಾಗಲೇ ಮುಸ್ಲಿಮರು ಅವಮಾನ ಮತ್ತು ಅನುಮಾನದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರ ಬಗ್ಗೆ ಯೋಚಿಸದೆ ಇಬ್ರಾಹಿಂ ಅವರು ಸಾಮೂಹಿಕ ಪ್ರಾರ್ಥನೆಗೆ ಈದ್ಗಾ ಮೈದಾನದಲ್ಲಿ ಅವಕಾಶ ಕೇಳಿರುವುದು ಸರಿಯಲ್ಲ. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಸಮಿಉಲ್ಲಾಖಾನ್ ಒತ್ತಾಯಿಸಿದ್ದಾರೆ.
ಈಗಾಗಲೇ ಮುಸ್ಲಿಂ ಧರ್ಮಗುರುಗಳು ಹಬ್ಬಕ್ಕಾಗಿ ಬಟ್ಟೆ ಖರೀದಿಸಬೇಡಿ ಎಂದು ಹೇಳಿದ್ದರೆ, ಚಿಂತಕರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ ಎಂದು ಹೇಳಿದ್ದಾರೆ. ಮುಸ್ಲಿಮರು ಕೊರೊನಾ ಸೋಂಕಿನಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳಲಿ, ಯಾವುದೇ ಅಪಪ್ರಚಾರಕ್ಕೆ ಬಲಿಯಾಗದಿರಲಿ ಎಂಬ ಸದುದ್ದೇಶ ಇದರ ಹಿಂದಿದೆ ಎಂದು ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಹೇಳಿದೆ.








