ಕೊರೊನಾ ಲಕ್ಷಣ ಹೊಂದಿದವರಿಗೆ ಮಾತ್ರ ಪರೀಕ್ಷೆ ಮಾಡಲಾಗುವುದು: ಡಾ. ಕೆ ಸುಧಾಕರ Saaksha Tv
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ, ಆದರೆ ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆ ಕಡಿಮೆ ಇದೆ. ಮತ್ತು ರಾಜ್ಯದಲ್ಲಿ ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾರ್ಗಸೂಚಿಯಂತೆ ಕೊರೊನಾ ಲಕ್ಷಣ ಹೊಂದಿದವರಿಗೆ ಮಾತ್ರ ಪರೀಕ್ಷೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ ಸುಧಾಕರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವೈಜ್ಞಾನಿಕ ಪರಾಮರ್ಶೆ ಮಾಡಿ, ತಜ್ಞರ ಅಭಿಪ್ರಾಯ ತೆಗೆದುಕೊಂಡು ವೀಕೆಂಡ್ ಕರ್ಫ್ಯೂ ರದ್ದು ಮಾಡಲಾಗಿದೆ. ಹಾಗಾಗಿ ಜನರು ಎಚ್ಚರಿಕೆಯಿಂದ ಇದ್ದರೆ ಮಾತ್ರ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಕೊರೊನಾ ಮೂರನೇ ಅಲೆಯು ಇನ್ನೂ 2-3 ವಾರಗಳಲ್ಲಿ ತೀರ್ವತೆ ಕಳೆದುಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿಸಿದರು.
ಅಲ್ಲದೇ ಜನರ ಜೀವ ಹಾಗೂ ಜೀವನ ಎರಡೂ ಮುಖ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಈಗ ಜನರು ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಅರಿತು ನಡೆಯಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಒಂದು ವೇಳೆ, ಮತ್ತೆ ಕೊರೊನಾ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುವುದು ಹೆಚ್ಚಾದರೆ ಸರಕಾರ ಬೇರೆ ದಾರಿ ಇಲ್ಲದೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಲಿದೆ ಎಂದು ಸೂಚನೆ ನೀಡಿದರು.








