‘ಕೆಜಿಎಫ್-2’ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಈ ಸಿನಿಮಾಗಾಗಿ ಕೋಟ್ಯಾಂತರ ಸಿನಿ ರಸಿಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಲ್ಲೂ ರಾಕಿಭಾಯ್ ಅಭಿಮಾನಿಗಳಂತೂ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊರೊನಾ ಲಾಕ್ ಡೌನ್ ನಿಂದ ಮನೆಯಲ್ಲಿಯೇ ಇರಬೇಕಾಗಿದೆ.
ಈ ಸಿನಿಮಾ ಅಕ್ಟೋಬರ್ ನಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿ ಬಿಟ್ಟರೇ ಕೆಜಿಎಫ್ ಬಗ್ಗೆ ಇದುವರೆಗೂ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಇದೀಗ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೊಸ ಅಪ್ಡೇಟ್ ಅನ್ನು ನೀಡಿದ್ದಾರೆ.
ಕಾರ್ತಿಕ್ ಗೌಡ ಟ್ವಿಟ್ಟರ್ ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಕೆ.ಜಿ.ಎಫ್ ಚಾಪ್ಟರ್ 2 ಮ್ಯೂಸಿಕ್ ಸೆಷನ್ ಎಂದು ಬರೆದುಕೊಂಡಿದ್ದಾರೆ. ಅಂದರೆ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆರಂಭ ಮಾಡಿದೆ. ಇದರಲ್ಲಿ ಮೊದಲನೆಯದಾಗಿ ಚಿತ್ರದ ಮ್ಯೂಸಿಕ್ ಬಗ್ಗೆ, ಸಿನಿಮಾದ ತಂಡ ತಲೆಕೆಡಿಸಿಕೊಂಡಿದೆ. ನಿರ್ಮಾಪಕ ಕಾರ್ತಿಕ್ ಗೌಡ, ಸಿನಿಮಾಟೋಗ್ರಾಫರ್ ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾದ ಸಂಗೀತದ ಬಗ್ಗೆ ಒಟ್ಟಾಗಿ ಕೆಲಸ ನಿರ್ವಹಿಸ್ತುತ್ತಿದ್ದಾರೆ.
ಇನ್ನು ಕೆ.ಜಿ.ಎಫ್-2 ಸಿನಿಮಾ ಈ ಹಿಂದೆ ಹೇಳಿದಂತೆ ಅಕ್ಟೋಬರ್ 23ರಂದು ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ವಿಶೇಷವಾಗಿ ಚಾಪ್ಟರ್-2ನಲ್ಲಿ ಬಾಲಿವುಡ್ ಖ್ಯಾತ ನಟರಾದ ಸಂಜಯ್ ದತ್ ಮತ್ತು ನಟಿ ರವೀನಾ ಟಂಡನ್ ನಟಸಿದ್ದಾರೆ. ಹಾಗಾಗಿ ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗಿದೆ








