ಮೂಕ ಪ್ರೇಮಿಗಳಿಗೆ ಸೇತುವೆಯಾಯ್ತು ವಾಟ್ಸಾಪ್ Saaksha Tv
ರಾಣೆಬೆನ್ನೂರ: ಅವರಿಬ್ಬರೂ ಮೂಗರು, ಜೊತೆಗೆ ಕಿವುಡುತನ, ಇಬ್ಬರ ನಡುವೆ ಪ್ರೀತಿ ಅರಳಿದೆ. ಪ್ರೀತಿ ವಾಟ್ಸಾಪ್ ಮೂಲಕ ಮದುವೆವರೆಗೂ ತಲುಪಿರುವ ಅಪರೂಪದ ಪ್ರೇಮ ಪ್ರಸಂಗ ರಾಣೆಬೆನ್ನೂರಿನಲ್ಲಿ ನಡೆದಿದೆ.
ಅಕ್ಷತಾ ಬಿ ಹಾಗೂ ಕೆ.ಸಂಜು ವಾಲ್ಮೀಕಿ ಬಾಲ್ಯದಿಂದಲೇ ಸ್ನೇಹಿತರು. ಶಾಲೆಯ ಅಂಗಳದಲ್ಲಿ ಸ್ನೇಹಿತರಾಗಿದ್ದ ಅವರು, ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತಿಯೇ ಅವರಿಬ್ಬರ ಮಧ್ಯದಲ್ಲಿನ ಸ್ನೇಹ ಪ್ರೀತಿಗೆತಿರುಗಿತ್ತು. ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು ಅವರ ಮಧ್ಯೆ ಆರಂಭದಲ್ಲಿ ಇದ್ದದ್ದು ಕೇವಲ ಕೈಸನ್ನೆ, ಕಣ್ಸನ್ನೆ ಮಾತ್ರ. ನಂತರ ಅವರಿಗೆ ವರದಾನವಾಗಿದ್ದು ವಾಟ್ಸಾಪ್. ಈಗ ಅದೇ ವಾಟ್ಸಾಪ್ ಮೂಲಕ ಅವರ ಪ್ರೀತಿ ಮದುವೆವರೆಗೂ ತಲುಪಿದೆ.
ಅಕ್ಷತಾ ಬಿ ಹರಪನಹಳ್ಳಿ ತಾಲ್ಲೂಕಿನ ಕಡಬಗೇರಿ ಗ್ರಾಮದ ನಿವಾಸಿ ಹಾಗೂ ಕೆ.ಸಂಜು ವಾಲ್ಮೀಕಿ ರಾಣೆಬೆನ್ನೂರು ತಾಲ್ಲೂಕಿನ ಮೇಡೇರಿ ಗ್ರಾಮದ ನಿವಾಸಿ. ಇವರಿಬ್ಬರೂ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿ. ಎಸ್ಸೆಸ್ಸೆಲ್ಸಿ ನಂತರ ಸಂಜು ಬೆಂಗಳೂರು ನಗರದಲ್ಲಿ ಐಟಿಐ ವ್ಯಾಸಂಗ ಮುಗಿಸಿಕೊಂಡು, ಖಾಸಗಿ ಕಂಪೆನಿ ಒಂದರಲ್ಲಿ ಉದ್ಯೋಗ ಸೇರಿದ್ದಾರೆ. ಇವರಿಬ್ಬರು ಪರಸ್ಪರ ತಮ್ಮ ಪ್ರೀತಿಯ ಭಾವನೆ, ಪ್ರೇಮದ ಕನಸು, ಕನವರಿಕೆಗಳನ್ನು ವಾಟ್ಸಪ್ ಸಂದೇಶದ ಮೂಲಕವೇ ವಿನಿಮಯ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೇಮಸೌಧ ಕಟ್ಟಿದ್ದಾರೆ.
ಸಂಜು ಹಾಗೂ ಅಕ್ಷತಾಳ ದಾಂಪತ್ಯಕ್ಕೆ ಕಾಲಿಟ್ಟ ಸುದ್ದಿ ಹರಡುತ್ತಿದ್ದಂತಿಯೇ ಕುಪಿತಗೊಂಡ ಅಕ್ಷತಾ ಪೋಷಕರು, ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಚಿಗಟೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ನವ ದಂಪತಿಯನ್ನು ಠಾಣೆಗೆ ಕರೆತಂದ ಪೊಲೀಸರು ಇಬ್ಬರನ್ನು ಬರವಣಿಗೆಯ ಮೂಲಕವೇ ವಿಚಾರಣೆಗೆ ಒಳಪಡಿಸಿದರು.
ಆಗ ನವಜೋಡಿ, ಪೋಷಕರ ಆರೋಪವನ್ನು ಅಲ್ಲಗಳೆಯುವ ಮೂಲಕ, ತಮ್ಮ ದಶಕದ ಪ್ರೀತಿ, ಪ್ರೇಮವನ್ನು ಎಳೆಎಳೆಯಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರಿಂದ ಪೊಲೀಸರು, ದೂರುಕೊಟ್ಟ ಪೋಷಕರು ಹಾಗೂ ಸೊಸೆಯಾಗಿ ಸ್ವೀಕರಿಸಿದ ಸಂಜು ಪೋಷಕರನ್ನು ಕೂಡಿಸಿಕೊಂಡು ಬುದ್ಧಿ ಮಾತು ಹೇಳಿದ್ದಾರೆ. ನವದಂಪತಿಗೆ ಯಾರಿಂದಲೂ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಎಂದ ಹೇಳಿದ್ದಾರೆ.








