ರಶ್ಮಿಕಾ ಮಂದಣ್ಣ, ಸದ್ಯ ಸೌತ್ ಸಿನಿಮಾ ರಂಗದ ಬಹು ಬೇಡಿಕೆಯ ನಟಿಯರಲ್ಲೊಬ್ಬರು. ಟಾಲಿವುಡ್ ನಲ್ಲಂತೂ ಈ ಕಿರಿಕ್ ಹುಡ್ಗಯದ್ದೇ ಹವಾ..! ತೆಲುಗಿನ ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿ ಪಾತ್ರಕ್ಕೆ ಕನ್ನಡತಿ ರಶ್ಮಿಕಾ ಮಂದಣ್ಣ ಮೊದಲ ಆಯ್ಕೆ! ಅಂದ್ಹಾಗೆ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ರಂಗದಲ್ಲಿ ಏರುತ್ತಿರುವ ಎತ್ತರ ಸಾಮಾನ್ಯವಾದುದಲ್ಲ. ಈ ಮಧ್ಯೆ ರಶ್ಮಿಕಾ ಮಂದಣ್ಣ ಸಿನಿರಂಗಕ್ಕೆ ಬಂದಿದ್ದು ಹೇಗೆ? ರಶ್ಮಿಕಾ ಮಂದಣ್ಣ ಸಿನಿಮಾ ರಂಗಕ್ಕೆ ಬರಲು ಕಾರಣವಾದ ಘಟನೆ ಯಾವುದು? ಎಂಬೋದರ ಬಗ್ಗೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ತೆಲುಗು ಅಂಗಳಲ್ಲಿ ತಮ್ಮದೇಯಾದ ಛಾಪು ಮೂಡಿಸುತ್ತಿದ್ದಾರೆ. ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ಸೂಪರ್ ಹಿಟ್ ಸಿನಿಮಾ ಸರಿಲೇರು ನೀಕೆವ್ವರು ಚಿತ್ರದಲ್ಲಿ ನಟಿಸಿದ್ದ ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ರಶ್ಮಿಕಾ ಮಂದಣ್ಣ ಇಂದು ಯಾವ ಸ್ಥಾನದಲ್ಲಿದ್ದಾರೋ ಆ ಸ್ಥಾನಕ್ಕೆ ಬರಲು ಬಹುಮುಖ್ಯ ಕಾರಣ ಆ ಒಂದು ಘಟನೆಯಂತೆ. ಅಂಥಹಾ ಅಪರೂಪದ ಘಟನೆಯ ಬಗ್ಗೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿವೊಬ್ಬ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಜೊತೆ ತೆಗೆಸಿಕೊಂಡಿರುವ ಚಿತ್ರವೊಂದರ ಬಗ್ಗೆ ರಶ್ಮಿಕಾ ಮಂದಣ್ಣ ಅವರಿಗೆ ಪ್ರಶ್ನೆ ಕೇಳಿದ್ದ. ಇದಕ್ಕೆ ಉತ್ತರಿಸಿದ ರಶ್ಮಿಕಾ ಮಂದಣ್ಣ, “ನಾನು ಇಂದು ಏನಾಗಿದ್ದೇನೋ ಅದಕ್ಕೆ ಮೂಲ ಕಾರಣ ಆ ದಿನದ ಘಟನೆ” ಎಂದಿದ್ದಾರೆ.
ಫೋಟೋ ಹಿಂದಿನ ಕಹಾನಿ ಏನು?
ಅಕ್ಷಯ್ ಕುಮಾರ್ ಅವರೊಟ್ಟಿಗೆ ತೆಗೆಸಿಕೊಂಡಿರುವ ಆ ಚಿತ್ರ, 2014 ರ ‘ಫ್ರೆಶ್ ಫೇಸ್ ಇಂಡಿಯಾ’ 2014 ಸೌಂದರ್ಯ ಸ್ಪರ್ಧೆಯದ್ದು. ಸ್ಪರ್ಧೆಯಲ್ಲಿ ಗೆದ್ದಿದ್ದ ರಶ್ಮಿಕಾ ಗೆ ಅಕ್ಷಯ್ ಕುಮಾರ್ ಮತ್ತು ರಾಣಾ ದಗ್ಗುಬಾಟಿ ಪ್ರಶಸ್ತಿ ನೀಡಿದ್ದರು.
ಆ ಸ್ಪರ್ಧೆಯಲ್ಲಿ ಗಮನ ಸೆಳೆದಿದ್ದ ರಶ್ಮಿಕಾ ರನ್ನು ನಂತರ ಕಿರಿಕ್ ಪಾರ್ಟಿ ಸಿನಿಮಾಕ್ಕೆ ಆಯ್ಕೆ ಮಾಡಲಾಯಿತು. ಸಿನಿಮಾ ಬಿಡುಗಡೆ ಆದ ಬಳಿಕ ಆಗಿದ್ದು ಇತಿಹಾಸ. ಇಂದು ಕನ್ನಡತಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳನ್ನು ನಟಿಸುತ್ತಾ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.








