ಬೆಂಗಳೂರು : ದೇಶದ ಜನರನ್ನು ಮೂರ್ಖರನ್ನಾಗಿ ಮಾಡುವುದಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಉದ್ದೇಶ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಆರಂಭದಿಂದಲೇ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದರು. ರಾಜ್ಯಗಳಿಗೆ ಆರ್ಥಿಕ ನೆರವು ನೀಡುವಂತೆ 15ನೇ ಪೇ ಕಮೀಷನ್, ನಾಲ್ಕು ಅಂಶಗಳನ್ನು ಆಧರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ, ರಾಜ್ಯಗಳಿಗೆ ಯಾವ ರೀತಿ ಹಣ ಸಂದಾಯ ಮಾಡುತ್ತಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸದ್ಯ ಘೋಷಿಸಿರುವ ವಿಶೇಷ ಪ್ಯಾಕೇಜ್ ನಲ್ಲಿ ಕೇಂದ್ರದ ಪಾಲೆಷ್ಟು ಎಂದು ಪ್ರಶ್ನಿಸಿದ ಹೆಚ್ ಡಿಕೆ, ಆರೂವರೆ ಲಕ್ಷ ಕೋಟಿಯಲ್ಲಿ ಕೇಂದ್ರದ ಪಾಲು 2,500 ಕೋಟಿ ಮಾತ್ರ. ಕೇಂದ್ರದ 2,500 ಕೋಟಿಯಿಂದ ಯಾವ ಚೇತರಿಕೆ ಸಾಧ್ಯ..? ಎಂದರು. ಲಾಕ್ ಡೌನ್ ನಿಂದಾಗಿ 40 ಕೋಟಿ ಜನ ನಿರುದ್ಯೋಗಿಗಳಾಗುತ್ತಾರೆ. ಮೇ 13ರ ಪ್ಯಾಕೇಜ್ ಯಾವುದೇ ನೆರವಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಸದ್ಯ ಕೇಂದ್ರ ಸರ್ಕಾರದ್ದು ಕೇವಲ 34 ಲಕ್ಷ ಕೋಟಿ ಬಜೆಟ್. ಆರ್ಥಿಕ ಹೊರೆ ಬೀಳುವುದು ಕೇಂದ್ರ ಸರ್ಕಾರಕ್ಕಲ್ಲ, ಬ್ಯಾಂಕ್ ಗಳು, ಹಣಕಾಸಿನ ಸಂಸ್ಥೆಗಳ ಮೇಲೆ. ಕಾರ್ಮಿಕರ ಪಿಎಫ್ ಗೆ ಕೇಂದ್ರದ 2,500 ಕೋಟಿ ಬಳಕೆಯಾಗಲಿದೆ. ಟಿಸಿಎಸ್ 50 ಸಾವಿರ ಕೋಟಿ ಘೋಷಿಸಿದೆ. ಇದನ್ನೂ ಕೇಂದ್ರ ಸರ್ಕಾರ ನೀಡುವುದಿಲ್ಲ, ರಾಜ್ಯ, ಹಣಕಾಸಿನ ಸಂಸ್ಥೆಗಳೇ ಭರಿಸಬೇಕು. ಇಲ್ಲಿ ಕೇಂದ್ರದ ಪಾಲು ಏನು ಅನ್ನೋದೇ ಗೊತ್ತಾಗುತ್ತಿಲ್ಲ. ಇಲ್ಲಿ ದೇಶದ ಜನರನ್ನ ಮೂರ್ಖರನ್ನಾಗಿ ಮಾಡುವುದಷ್ಟೇ ಕೇಂದ್ರ ಸರ್ಕಾರದ ಉದ್ದೇಶ ಎಂದು ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
2019ರಲ್ಲಿ ಬ್ಯಾಂಕುಗಳು 87.46 ಲಕ್ಷ ಕೋಟಿ ನೀಡಿವೆ. ಕೇಂದ್ರ ಘೋಷಿಸಿರುವ ಪ್ಯಾಕೇಜ್ ನಲ್ಲಿ ಇದೂ ಸೇರಿದೆ. ಎಂಎಸ್ ಎಂಇಗಳಿಗೆ ಬ್ಯಾಂಕುಗಳು ಸಾಲ ನೀಡುತ್ತವೆ. 3 ಲಕ್ಷ ಕೋಟಿ ಎಂಎಸ್ ಎಂಇಗೆ ಕೇಂದ್ರ ಸರ್ಕಾರ ಘೋಷಿಸಿದ್ದು, ಇದು ಬ್ಯಾಂಕುಗಳು ಕೊಡುವ ಸಾಲವೇ ಹೊರತು ಕೇಂದ್ರದ ಟ್ರಜರಿಯಿಂದ ಕೊಡುವ ಹಣವಲ್ಲ ಎಂದು ದೂರಿದರು ಹೆಚ್ ಡಿಕೆ. ಇನ್ನು ಕೇಂದ್ರದ ಪ್ಯಾಕೇಜ್ ನಲ್ಲಿ ಯಾವುದೇ ಹೊಸತನವಿಲ್ಲ, ಉದ್ಯಮಗಳಿಗೆ ಶಕ್ತಿ ತುಂಬುವ ಕೆಲಸವೂ ಆಗ್ತಿಲ್ಲ, ಟಿಡಿಎಸ್ ಕಡಿತ ಅಂತ ಹೇಳ್ತಾರೆ. 2.5 ಹಣ ಪ್ರತಿ ವ್ಯಕ್ತಿಗೆ ಸಿಗಬಹುದು. ಆದರೆ, ಆ ಹಣಕ್ಕೆ ಬಡ್ಡಿ ಸಮೇತ ತೆರಿಗೆ ಕಟ್ಟಬೇಕಾಗುತ್ತದೆ ಎಂದು ಕೇಂದ್ರದ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.








