ಕಪ್ಪು ಬಣ್ಣದ ಸೂಟು ತೊಟ್ಟ 6 ಯುವಕರು, ಅವರ ಕಣ್ಣಲ್ಲಿ ರಾರಾಜಿಸೋ ಕೂಲ್ ಇನ್ ಗ್ಲಾಸ್ ಗಳು, ಲೆದರ್ ಶೂಸ್ ಜೊತೆಗೆ ಟೆಕ್ನೋ ಬೀಟಿಗೆ ಹೆಜ್ಜೆ ಹಾಕೋ ಹುಡುಗರು. ಸದ್ಯ ಇವರೇ ಸಾಮಾಜಿಕ ಜಾಲತಾಣಗಳ ಸೂಪರ್ ಸ್ಟಾರ್ ಗಳು..
ಹೌದು..! ಶವಪೆಟ್ಟಿಗೆಯನ್ನು ನಾಲ್ಕೂ ಮೂಲೆಯಿಂದಲೂ ಹೆಗಲ ಮೇಲೆ ಹೊತ್ತು ಕುಣಿಯೋ ಈ ಯುವಕರ ಸ್ಟೈಲ್ ಇತ್ತೀಚೆಗೆ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ. ಆದ್ರೆ, ಹೀಗೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಕುಣಿಯುವ ಈ ಹುಡುಗರು ನೋಡುಗರ ಕಣ್ಣಿಗೆ ಕಾಮಿಡಿಯನ್ ಗಳಾಗಿ ಕಂಡರೂ ಅವರು ಹಾಗೆ ಶವಪೆಟ್ಟಿಗೆಯನ್ನ ಹೊತ್ತು ಕುಣಿಯುವುದರ ಹಿಂದೆ ರೋಚಕ ಕಹಾನಿಯೇ ಅಡಗಿದೆ.
ಇದೊಂದು ಪ್ರಾಚೀನ ಸಂಸ್ಕೃತಿ
ಹೌದು..! ಪ್ರಿಯ ಓದುಗ ದೊರೆಯೇ, ಪಶ್ಚಿಮ ಆಫ್ರಿಕಾದ ಘಾನಾ ದೇಶದಲ್ಲಿ ಇಂತಹದೊಂದು ಪ್ರಾಚೀನ ಸಂಸ್ಕೃತಿ ಇನ್ನೂ ಚಾಲ್ತಿಯಲ್ಲಿದೆ. ಯಾರಾದರೂ ಅಲ್ಲಿ ಮರಣ ಹೊಂದಿದರೆ ಅವರನ್ನ ಖುಷಿಯಿಂದ ಮತ್ತೊಂದು ಲೋಕಕ್ಕೆ ಬೀಳ್ಕೊಡಬೇಕು. ಅದಕ್ಕೆ ಅಂತಾನೇ ಘಾನಾದಲ್ಲಿ ವಿಶೇಷ ನೃತ್ಯ ತಂಡಗಳಿವೆ. ಅವರನ್ನ ಡ್ಯಾನ್ಸಿಂಗ್ ಪಾಲ್ ಬೇರರ್ಸ್ ಎಂದೂ ಸಹ ಕರೆಯಲಾಗುತ್ತೆ.
ಘಾನಾ ದೇಶದಲ್ಲಿ ಯಾರಾದರೂ ಮರಣ ಹೊಂದಿದರೇ ಈ ಡ್ಯಾನ್ಸಿಂಗ್ ಪಾಲ್ ಬೇರರ್ಸ್ ಗಳನ್ನು ಅಂತ್ಯಕ್ರಿಯೆಯ ದಿನ ಹಣ ಕೊಟ್ಟು ಕರೆಸಿಕೊಳ್ಳಲಾಗುತ್ತೆ. ನಾಲ್ಕರಿಂದ 6 ಜನರಿರುವ ಈ ತಂಡದವರು ಅಂತ್ಯಸಂಸ್ಕಾರದ ದಿನ ಕಪ್ಪು ಬಣ್ಣದ ಸೂಟು ತೊಟ್ಟು, ಕೂಲ್ ಇನ್ ಗ್ಲಾಸ್ ಹಾಕಿಕೊಂಡು ಲೆದರ್ ಶೂಸ್ ಧರಿಸಿ ಸಖತ್ ಸ್ಟೈಲಿಶ್ ಆಗಿ ರೆಡಿಯಾಗಿ ಬರುತ್ತಾರೆ. ಹಾಗೇ ಬಂದವರು.. ಮೃತದೇಹವನ್ನು ಮಣ್ಣು ಮಾಡುವ ಮುನ್ನ ಶವಪೆಟ್ಟಿಗೆಯನ್ನ ಹೊತ್ತು ಬೊಂಬಾಟ್ ಸ್ಟೆಪ್ಸ್ ಹಾಕುತ್ತಾರೆ. ಈ ಮೂಲಕ ಮೃತನಿಗೆ ಬೀಳ್ಕೊಡುಗೆ ನೀಡುತ್ತಾರೆ. ಜೊತೆಗೆ ಮೃತರ ಕುಟುಂಬಸ್ಥರ ಬೀಳ್ಕೊಡುಗೆಯ ಆಸೆಯನ್ನ ನೆರವೇರಿಸುತ್ತಾರೆ.
ಇದು ಒಂದು ಮೂಲದ ಕಹಾನಿಯಾದರೇ…. ಈ ಕಫಿನ್ ಡ್ಯಾನ್ಸಿಂಗ್ ಹಿಂದೆ ಮತ್ತೊಂದು ಕಥೆ ಇದೆ.
ಪ್ರಿಯ ಓದುಗರೇ ಈ “ಡ್ಯಾನ್ಸಿಂಗ್ ಪಾಲ್ ಬೇರರ್ಸ್” ವಿಡಿಯೋ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಈ ವಿಡಿಯೋದಲ್ಲಿ ಬರುವ ಮ್ಯೂಸಿಕ್ ಗೆ ಯುವ ಜನತೆ ಫಿದಾ ಆಗಿದ್ದು, ಆ ಸಂಗೀತವನ್ನೇ ಎಷ್ಟೋ ಮಂದಿ ತಮ್ಮ ಮೊಬೈಲ್ ನ ರಿಂಗ್ ಟೂನ್ ಆಗಿ ಮಾಡಿಕೊಂಡಿದ್ದಾರೆ.
ಇನ್ನು ಕಫಿನ್ ಡ್ಯಾನ್ಸಿಂಗ್ ಹಿಂದಿರುವ ಮತ್ತೊಂದು ಕಹಾನಿಗೆ ದಕ್ಷಿಣ ಅಮೇರಿಕ ಖಂಡದ ಲಿಂಕ್ ಇದೆ. ಅದೇನಂದ್ರೆ, ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದಲ್ಲಿ ಸುರಿನಾಮ್ ಎಂಬ ದೇಶ ಇದೆ. ಮೊದಲು ಈ ದೇಶವನ್ನ ಡಚ್ ಘಯಾನಾ ಎಂದು ಕರೆಯಲಾಗುತ್ತಿತ್ತು. 1975ರಲ್ಲಿ ಸ್ವತಂತ್ರವಾಗುವ ಮೊದಲು ಸುರಿನಾಮ್ ನೆದರ್ಲೆಂಡ್ಸ್ ಪ್ರದೇಶದ ಹಿಂದಿನ ಸಾಮ್ರಾಜ್ಯವಾಗಿತ್ತು. ಆದ್ರೆ ಆಫ್ರಿಕಾದಲ್ಲಿ ಉಳಿದುಕೊಂಡ ಸುರಿನಾಮ್ ಜನಾಂಗದವರಲ್ಲಿ ಹಿಂದಿನಿಂದಲೂ ಮರಣವನ್ನು ಈ ರೀತಿ ಶವಪೆಟ್ಟಿಗೆ ಹೊತ್ತು ಕುಣಿದು ಸಂಭ್ರಮದಿಂದ ಆಚರಿಸುವ ಪ್ರತೀತಿ ಇತ್ತಂತೆ. ಅದು ಘಯಾನಾದಲ್ಲಿ ಇಂದಿಗೂ ಮುಂದುವರಿಯುತ್ತಿದೆ ಎಂದು ಹೇಳಲಾಗ್ತಿದೆ.
ರಾತ್ರೋ ರಾತ್ರಿ ಫೇಮಸ್ : ಮಿಲಿಯನ್ ಗಟ್ಟಲೇ ವೀವ್ಸ್
ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋ ಅಪ್ ಲೋಡ್ ಆಗುತ್ತಿದ್ದಂತೆ ಈ ನೃತ್ಯಗಾರರು (ಡ್ಯಾನ್ಸಿಂಗ್ ಪಾಲ್ ಬೇರರ್ಸ್) ರಾತ್ರೋ ರಾತ್ರಿ ಫೇಮಸ್ ಆಗಿರೋದು ಅಲ್ಲದೆ ವಿಡಿಯೋ ಸಖತ್ ವೈರಲ್ ಆಗಿದೆ.
ಇನ್ನು ತಮ್ಮ ವಿಡಿಯೋ ಕ್ಲಿಪ್ಪಿಂಗ್ ಅಷ್ಟೊಂದು ವೈರಲ್ ಆಗಿರುವ ಬಗ್ಗೆ ಕಫಿನ್ ಡ್ಯಾನ್ಸರ್ಸ್ ನ ನಾಯಕ ಬೆಂಜಮಿನ್ ಎಯ್ಡೂ ಅಚ್ಚರಿ ಪಟ್ಟಿದ್ದಾರೆ. ಎಲ್ಲರಂತೆ ನಾವು ಇದ್ದೇವು, ಆದ್ರೆ, ಮಾರ್ಚ್ ತಿಂಗಳ ಒಂದು ಮುಂಜಾನೆ ಎದ್ದು ನೋಡಿದ್ರೆ ನಾವು ವಿಶ್ವಾದ್ಯಂತ ವೈರಲ್ ಆಗಿದ್ದೇವೆ. ಇದು ಹೇಗಾಯ್ತು ಗೊತ್ತಿಲ್ಲ. ಆದರೂ ತುಂಬಾ ಫನ್ನಿಯಾಗಿದೆ ಅಂತಾ ಹೇಳಿದ್ದಾರೆ.
ಒಟ್ಟಾರೆ, ಶವದ ಪೆಟ್ಟಿಗೆಗೆ ಸಂಭ್ರಮದ ಮುಕ್ತಿ ನೀಡುವ ಈ ಆಫ್ರಿಕಾದ ಕಫಿನ್ ಡ್ಯಾನ್ಸರ್ ಗಳು ಇಂದಿನ ಸಾಮಾಜಿಕ ಜಾಲತಾಣದ ಸ್ಟಾರ್ ಗಳು ಅಂದ್ರೆ ತಪ್ಪಾಗಲ್ಲ.








