ವಿರಾಟ್ ಕೊಹ್ಲಿ… ಟೀಮ್ ಇಂಡಿಯಾದ ನಾಯಕ. ವಿಶ್ವ ಕ್ರಿಕೆಟ್ ನ ಸದ್ಯದ ರನ್ ಮೇಷಿನ್. ಇಂತಹ ವಿರಾಟ್ ಕೊಹ್ಲಿಗೂ ದೇಸಿ ಕ್ರಿಕೆಟ್ ನಲ್ಲಿ ನಡೆಯುತ್ತಿದ್ದ ಲಂಚವಾತರದ ಸಣ್ಣ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಭಾರತ ಫುಟ್ ಬಾಲ್ ತಂಡದ ಆಟಗಾರ ಸುನೀಲ್ ಚೆಟ್ರಿ ಜೊತೆಗಿನ ಇನ್‍ಸ್ಟಾಗ್ರಾಂ ಲೈವ್ ನಲ್ಲಿ ವಿರಾಟ್ ತನ್ನ ದೇಸಿ ಕ್ರಿಕೆಟ್ ನಲ್ಲಿ ಆಗಿರುವಂತಹ ಒಂದು ವಿಚಾರವನ್ನು ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅದ್ಭುತ ಪ್ರತಿಭಾವಂತ. ವಿವಿಧ ವಯೋಮಿತಿ ಕ್ರಿಕೆಟ್ ನಲ್ಲಿಯೇ ಅಪ್ರತಿಮ ಸಾಧನೆ ಮಾಡಿರುವ ವಿರಾಟ್ 19 ವಯೋಮಿತಿ ವಿಶ್ವಕಪ್ ಅನ್ನು ಗೆದ್ದುಕೊಂಡ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಆದ್ರೆ ವಿರಾಟ್ ಒಂದು ಬಾರಿ ದೇಸಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆಗ ವಿರಾಟ್ ತಂದೆಯ ಬಳಿ ಒಬ್ಬರು ಕೇವಲ ಪ್ರತಿಭೆ ಇದ್ರೆ ಸಾಲದು ಸಮ್‍ಥಿಂಗ್ ಕೊಟ್ರೆ (ಲಂಚ) ತಂಡಕ್ಕೆ ಆಯ್ಕೆಯಾಗುತ್ತಾನೆ ಅಂತ ಹೇಳಿದ್ರಂತೆ. ಆದ್ರೆ ವಿರಾಟ್ ಕೊಹ್ಲಿಯವರ ತಂದೆ ಅದಕ್ಕೆ ಒಪ್ಪಲಿಲ್ಲ. ನನ್ನ ಮಗ ತಂಡಕ್ಕೆ ಆಯ್ಕೆಯಾಗುವುದಾದ್ರೆ ಅದು ಆತನ ಅರ್ಹತೆಯಿಂದ ಮಾತ್ರ ಎಂದು ಹೇಳಿದ್ರಂತೆ.
ನನ್ನ ತಂದೆ ಮಧ್ಯಮ ವರ್ಗದಿಂದ ಬಂದವರು. ಅವರು ಕಠಿಣ ಪರಿಶ್ರಮದಿಂದ, ಬೀದಿ ಬದಿಯ ದೀಪದಲ್ಲಿ ಓದಿ ವಕೀಲ ವೃತ್ತಿ ಮಾಡಿಕೊಂಡಿದ್ದರು. ಅವರಿಗೆ ಸಮ್‍ಥಿಂಗ್ ಅಂದ್ರೆ ಏನು ಅಂತನೇ ಅರ್ಥ ಆಗಿಲ್ಲ. ಆದ್ರೆ ನನ್ನ ತಂದೆ ಒಂದು ಮಾತು ಹೇಳಿದ್ರು. ನೀವು ಆತನನ್ನು ಆಯ್ಕೆ ಮಾಡುವುದಾದ್ರೆ ಆತನ ಪ್ರತಿಭೆ ನೋಡಿ ಆಯ್ಕೆ ಮಾಡಿ. ಅದನ್ನು ಬಿಟ್ಟು ನಾನು ನಿಮಗೆ ಏನು ಕೊಡಲ್ಲ ಅಂತ ವಿರಾಟ್ ತನ್ನ ತಂದೆ ಹೇಳಿರುವ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

ಹೀಗಾಗಿ ವಿರಾಟ್ ದೇಸಿ ತಂಡಕ್ಕೆ ಆಯ್ಕೆಯಾಗಲಿಲ್ಲ. ವಿರಾಟ್ ಕೊಹ್ಲಿ ಮನಬಂದಂತೆ ಅತ್ತುಬಿಟ್ಟಿದ್ರಂತೆ. ಅಷ್ಟೇ ಅಲ್ಲ ಸಾಕಷ್ಟು ಆಘಾತಕ್ಕೂ ಒಳಗಾಗಿದ್ರಂತೆ. ಆದ್ರೆ ಈ ಘಟನೆಯಿಂದ ವಿರಾಟ್ ಸಾಕಷ್ಟು ಪಾಠ ಕಲಿಯುವಂತಾಯ್ತು. ಈ ಜಗತ್ತು ಯಾವ ರೀತಿ ಇದೆ ಎಂಬುದು ಕೂಡ ಗೊತ್ತಾಗಿಬಿಟ್ಟಿತ್ತು. ಅದಕ್ಕಾಗಿ ಕಠಿಣ ಶ್ರಮ ಪಟ್ಟೆ. ಯಶ ಸಾಧಿಸಬೇಕಾದ್ರೆ, ಯಾರು ಮಾಡದ ಸಾಧನೆ ಮಾಡಬೇಕಾದ್ರೆ, ನಾನು ಅಸಾಧಾರಣವಾಗಿರಬೇಕು. ನನಗೆ ನನ್ನ ತಂದೆ ನನಗೆ ಸರಿಯಾದ ಮಾರ್ಗವನ್ನು ತೋರಿಸಿದ್ರು. ಅವರ ನಡೆ -ನುಡಿಗಳು ನನ್ನ ಬದುಕಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ ಅಂತಾರೆ ವಿರಾಟ್ ಕೊಹ್ಲಿ.
ವಿರಾಟ್ ಕೊಹ್ಲಿ ತನ್ನ 18ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಕರ್ನಾಟಕ ವಿರುದ್ಧದ ಪಂದ್ಯವಾಡುತ್ತಿರುವಾಗ ವಿರಾಟ್ ತಂದೆ ತೀರಿ ಹೋಗಿದ್ದಾರೆ ಎಂಬ ಸುದ್ದಿ ಬರುತ್ತೆ. ವಿರಾಟ್ ಪಂದ್ಯ ಮುಗಿದ ನಂತರ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಅಲ್ಲದೆ ಮರುದಿನ ಅದ್ಭುತವಾಗಿ ಬ್ಯಾಟ್ ಮಾಡಿ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.








