ಮಾಜಿ ಶಾಸಕ ಹೆಚ್. ಡಿ. ಚೌಡಯ್ಯ ನಿಧನ Saakha Tv
ಮಂಡ್ಯ: ಮಾಜಿ ಶಾಸಕ ಹೆಚ್.ಡಿ.ಚೌಡಯ್ಯ ವಯೋಸಹಜ ಖಾಯಿಲೆಯಿಂದ (94) ನಿಧನ ಹೊಂದಿದ್ದಾರೆ.
ಮಂಗಳವಾರ ತಡರಾತ್ರಿ ಮಂಡ್ಯದ ಹೊಳಲು ಗ್ರಾಮದ ನಿವಾಸದಲ್ಲಿ ಚೌಡಯ್ಯ ಇಹಲೋಕ ತ್ಯಜಿಸಿದರು. ಪತ್ನಿ ದೊಡ್ಡಲಿಂಗಮ್ಮನವರ ಅಗಲಿಕೆಯ ನಂತರ ತೀವ್ರವಾಗಿ ಕ್ಷಿಣಿಸಿದ್ದ ಚೌಡಯ್ಯನವರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರರಿದ್ದಾರೆ. ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
ಇವರು 1928 ರಲ್ಲಿ ಜನಿಸಿದ್ದರು. ಚೌಡಯ್ಯ ಬಿಎಸ್ಸಿ (ಅಗ್ರಿ) ಪದವೀಧರರಾಗಿದ್ದರು. ಆಗಿನ ಕಾಲದಲ್ಲಿ ತಾಲೂಕು ಬೋಡ್೯ ಮೆಂಬರ್ ಹಾಗೂ ಅಧ್ಯಕ್ಷರಾಗುವ ಮೂಲಕ ರಾಜಕೀಯಕ್ಕೆ ಪಾದಾಪ೯ಣೆ ಮಾಡಿ, 4 ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
1989 ರಲ್ಲಿ ಮಂಡ್ಯದ ಪಿಎಸ್ ಇ ಟ್ರಸ್ಟ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಚೌಡಯ್ಯನರು 31 ವಷ೯ಗಳ ಕಾಲ ಸುದೀರ್ಘ ಆಡಳಿತ ನಡೆಸಿದರು. ಅಲ್ಲದೇ ಚೌಡಯ್ಯನವರು ಮಂಡ್ಯದ ಮಾದೇಗೌಡ, ಶಂಕರೇಗೌಡ, ಎಸ್.ಎಂ.ಕೃಷ್ಣ, ಸಿಂಗಾರಿಗೌಡರ ಸಮಕಾಲೀನರಾಗಿದ್ದವರು. ದಿ.ಮಾದೇಗೌಡರೊಂದಿಗೆ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದರು.
ಇಂದು ಸಂಜೆ 4 ಗಂಟೆಗೆ ಹೊಳಲು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯುತ್ತದೆ. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ.
ಹೆಚ್.ಡಿ.ಕುಮಾರಸ್ವಾಮಿ ಸಂತಾಪ: ನಾಲ್ಕು ಅವಧಿಗೆ ಶಾಸಕರು, ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ಚೌಡಯ್ಯನವರು ಆದರ್ಶ ಜನಪ್ರತಿನಿಧಿ ಆಗಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಎಣೆ ಇಲ್ಲದಷ್ಟು ಸೇವೆ ಸಲ್ಲಿಸಿದ್ದರು. ಹೆಚ್.ಡಿ.ಚೌಡಯ್ಯ ಅವರ ಅಗಲಿಕೆಯೊಂದಿಗೆ ಒಬ್ಬ ಪ್ರಾಮಾಣಿಕ, ಸೇವಾತತ್ಪರ, ನಿಸ್ವಾರ್ಥ ರಾಜಕಾರಣದ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಹೆಚ್‌ಡಿಕೆ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಸಂತಾಪ: ನನ್ನ ಆತ್ಮೀಯರೂ, ಹಿತೈಶಿಗಳೂ ಆಗಿದ್ದ ಮಂಡ್ಯದ ಹಿರಿಯ ಮುತ್ಸದ್ದಿ ಎಚ್.ಡಿ.ಚೌಡಯ್ಯ ಅವರ ನಿಧನ ಅತೀವ ದುಃಖದ ಸಂಗತಿ. ಪತ್ನಿಯವರ ಅಗಲಿಕೆ ಬಳಿಕ ಬಹಳ ನೊಂದಿದ್ದರು. ಈ ನೋವು ಇವರ ಆರೋಗ್ಯವನ್ನು ಹದಗೆಡಿಸಿತ್ತು. ಶತಾಯುಶಿ ಆಗುತ್ತಾರೆನ್ನುವ ನನ್ನ ನಿರೀಕ್ಷೆಯನ್ನು ನಿರಾಸೆಗೊಳಿಸಿ ನಮ್ಮನ್ನು ಅಗಲಿದ್ದಾರೆ.








