ಕೊಡಗು, ಮೇ 21 : ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತದಲ್ಲಿ ಚಿರಪರಿಚಿತ ನಟಿ ರಶ್ಮಿಕಾ ಮಂದಣ್ಣ, ಲಾಕ್ ಡೌನ್ ಹಿನ್ನೆಲೆಯಲ್ಲಿ ಹೆತ್ತವರ ಜೊತೆ ಕೊಡಗಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಪಾತ್ರದಿಂದ ಫೇಮಸ್ ಆದ ರಶ್ಮಿಕಾ ಮಂದಣ್ಣಗೆ, ಚಿತ್ರ ಸೂಪರ್ ಡೂಪರ್ ಆಗುತ್ತಿದ್ದಂತೆ ಅದೃಷ್ಟದ ಬಾಗಿಲು ತೆರೆಯಿತು.
ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ಬ್ರೇಕಪ್ ಕೂಡ ಮಾಡಿಕೊಂಡರು. ನಂತರ ತಮಿಳು ತೆಲುಗು ಚಿತ್ರಗಳಲ್ಲಿ ಬಿಝಿಯಾದ ನಟಿ ರಶ್ಮಿಕಾ ಸದ್ಯಕ್ಕೆ ಅಲ್ಲು ಅರ್ಜುನ್ ನಟನೆಯ ‘ಭೀಷ್ಮ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ಮನೆಯವರೊಂದಿಗೆ ಸಮಯ ಕಳೆಯುತ್ತಿರುವ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಇರುತ್ತಾರೆ. ಅಮ್ಮ, ತಂಗಿ ಜೊತೆಗಿನ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಅವರು ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರಿಸುತ್ತಿರುತ್ತಾರೆ. ಅರ್ಥಪೂರ್ಣವಾದ ಕ್ಯಾಪ್ಶನ್ ನೊಂದಿಗೆ ಫೋಟೋಗಳನ್ನು ಅಪ್‌ಲೋಡ್ ಮಾಡುವ ರಶ್ಮಿಕಾ ಈ ಬಾರಿ ಅವರಿಗೆ ಕಾಡುತ್ತಿರುವ ಅಭದ್ರತೆಯ ಬಗ್ಗೆ ಮಾತನಾಡಿದ್ದಾರೆ.
ಗೂಗಲ್ ಸುರಕ್ಷತೆಯಿಂದ, ಅಸ್ಪಷ್ಟತೆಯಿಂದ ಇರೋದು ಭರವಸೆಯಲ್ಲ ಎಂದು ಹೇಳುತ್ತದೆ. ಆದರೆ ಇದನ್ನು ನಾನು ಮನುಷ್ಯ ಎಂದು ಕರೆಯುತ್ತೇನೆ. ನಮಗೆ ನಮ್ಮ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಕೆಲವೊಂದು ವಿಚಾರಗಳಲ್ಲಿ ಅಸುರಕ್ಷತೆ ಕಾಡುತ್ತಿರುತ್ತದೆ.ನಾವು ನಮ್ಮ ಸ್ನೇಹಿತರನ್ನು ‘ ನಾನು ತುಂಬಾ ದಪ್ಪ ಇದ್ದೇನಾ, ತುಂಬಾ ಸಣ್ಣ ಇದ್ದೇನಾ, ನನ್ನ ಚರ್ಮ ಡ್ರೈ ಆಗಿದೆಯಾ, ನನ್ನ ಮುಖದಲ್ಲಿ ತುಂಬಾ ಎಣ್ಣೆಯಂಶ ಇದೆಯಾ’ ಅಂತೆಲ್ಲಾ ಹಲವಾರು ಪ್ರಶ್ನೆಗಳನ್ನು ಪ್ರಶ್ನಿಸುತ್ತೇವೆ. ನಿನ್ನ ಮುಖಕ್ಕೆ ಏನಾಯಿತು ಎಂದು ಅನೇಕರು ಪ್ರಶ್ನೆ ಮಾಡಿದರೆ ಮತ್ತೆ 10 ದಿನ ಹೊರಗೆ ಬರುವುದಿಲ್ಲ, ಯಾರಿಗೂ ಮುಖ ತೋರಿಸಲು ಇಷ್ಟ ಪಡುವುದಿಲ್ಲ ಎಂದು ಹೇಳಿರುವ ರಶ್ಮಿಕಾ ನಮ್ಮ ಜೀವನದಲ್ಲಿ ನಾವು ಅತಿ ಹೆಚ್ಚು ಸಮಯವನ್ನು ಇಂತಹ ಯೋಚನೆಗಳಲ್ಲಿ ಕಳೆಯುತ್ತೇವೆ. ಹಾಗಾಗಿ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇವೆ. ಇದನ್ನೇ ಅಸುರಕ್ಷತೆ, ಅಭದ್ರತೆ, ಕೀಳರಿಮೆ ಎನ್ನುವುದು. ನಮ್ಮ ಕೆಲಸ, ಹೃದಯ, ದೇಹ, ಮಾನಸಿಕ ಆರೋಗ್ಯ ಎಲ್ಲದರ ಬಗ್ಗೆ ನಮಗೆ ಅಸುರಕ್ಷತೆ ಭಾವ ಕಾಡುತ್ತಿರುತ್ತದೆ. ಇದನ್ನು ನಿಯಂತ್ರಿಸಲು ನಮಗೆ ಆಗುತ್ತಿಲ್ಲ. ಆದರೆ ನಾವು ನಮ್ಮ ಕೈಲಾದಷ್ಟು ಕಂಟ್ರೋಲ್ ಮಾಡಲು ನೋಡಬೇಕು. ಕೀಳರಿಮೆ, ಅಭದ್ರತೆಯನ್ನು ಶಕ್ತಿಯಾಗಿ ಪರಿವರ್ತಿಸಿಕೊಳ್ಳಬೇಕು. ನೀವು ತುಂಬಾ ಕಪ್ಪಗಿದ್ದರೂ, ಸಣ್ಣ ಇದ್ದರೂ, ಕಣ್ಣು ದೊಡ್ಡ ಇದ್ದರೂ ಪರವಾಗಿಲ್ಲ.. ಕೀಳರಿಮೆ, ಅಭದ್ರತೆ ಹೋಗುತ್ತಾ ಇರುತ್ತದೆ, ಬರುತ್ತಾ ಇರುತ್ತದೆ. ಆದರೆ ನಿಮ್ಮ ಬೆಲೆಯನ್ನು ನೀವು ಅರಿತುಕೊಳ್ಳಿ. ನಿಮ್ಮ ಮೇಲೆ ನೀವು ಮೊದಲು ನಂಬಿಕೆಯನ್ನು ಇಡಿ ಎಂದು ನಟಿ ರಶ್ಮಿಕಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲ ಮನೆಯಲ್ಲಿ ನಾಯಿಯಿದ್ದರೆ ಅದನ್ನು ಪ್ರೀತಿಸಿ. ಯಾಕೆಂದರೆ ಅದಕ್ಕೆ ನೀವೇ ಪ್ರಪಂಚವಾಗಿರುತ್ತೀರಿ ಎಂದು ಈ ಮೊದಲು ಹೇಳಿದ್ದರು. ರಶ್ಮಿಕಾ ಅವರ ಮನೆಯಲ್ಲಿ 3 ಕ್ಕೂ ಹೆಚ್ಚು ನಾಯಿಗಳಿದ್ದು, ಲಾಕ್ ಡೌನ್ ಸಮಯದಲ್ಲಿ ನಾಯಿಗಳ ಜೊತೆ ಸಮಯ ಕಳೆಯುವುದಾಗಿ ಹೇಳಿ ಕೊಂಡಿದ್ದರು.
ಇತ್ತೀಚೆಗೆ ರಶ್ಮಿಕಾ ಅವರು ಅಭಿಮಾನಿಗಳ ಜೊತೆ ಚರ್ಚೆ ಮಾಡುತ್ತಾ ಒಂದು ವೇಳೆ ನಾನು ಹೆಸರು ಬದಲಾಯಿಸಿಕೊಳ್ಳುವುದಾದರೆ ನೀವು ಯಾವ ಹೆಸರು ಸೂಚಿಸುತ್ತೀರಿ? ಎಂದು ಪ್ರಶ್ನೆ ಕೇಳಿದ್ದರು . ರಶ್ಮಿಕಾ ಪ್ರಶ್ನೆಗೆ ಅಭಿಮಾನಿಗಳು ಅನೇಕ ಹೆಸರುಗಳನ್ನು ಸೂಚಿಸಿ ರೀಟ್ವೀಟ್ ಮಾಡಿದ್ದರು. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಅಮ್ಮನ ಬಗ್ಗೆಯೂ ಮಾತನಾಡುತ್ತಾ, ತಂಗಿ ಜೊತೆಗಿನ ಕ್ಷಣಗಳನ್ನು ಹಂಚಿಕೊಳ್ಳುತ್ತಾ, ತಮ್ಮ ವಿವಿಧ ಭಂಗಿಯ ಭಾವಚಿತ್ರಗಳನ್ನು ಪೋಸ್ಟ್ ಮಾಡುತ್ತಾ ರಶ್ಮಿಕಾ ಲಾಕ್ ಡೌನ್ ಸಮಯ ಕಳೆಯುತ್ತಿದ್ದಾರೆ.








