ಕುಂದಾಪುರ, ಮೇ 23 : ಮುಂಬೈನಲ್ಲಿ ಕುಳಿತು ಡಾನ್ ತರ ಕರೆ ಮಾಡಿ ಮಾತನಾಡುವುದು, ಊರಿನಿಂದ ಸಣ್ಣ ಪುಟ್ಟ ಕಾರಣಕ್ಕೆ ಕರೆ ಮಾಡಿ ಅದನ್ನು ಆಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿದರೆ, ನಾಳೆಯಿಂದ ಮುಲಾಜಿಲ್ಲದೆ ಜೈಲಿಗಟ್ಟುತ್ತೇನೆ ಎಂದು ಉಡುಪಿ ಡಿ.ಸಿ ಜಿ. ಜಗದೀಶ್ ಕಿಡಿಗೇಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಕೊರೊನಾದ ಸಂಕಷ್ಟದ ಈ ಪರಿಸ್ಥಿತಿಯಲ್ಲೂ ಮಾನಸಿಕ ಕಿರುಕುಳ ಕೊಡುತ್ತಿರುವ ಕಿಡಿಗೇಡಿಗಳ ಮೇಲೆ ಗರಂ ಆಗಿರುವ ಉಡುಪಿ ಜಿಲ್ಲಾಧಿಕಾರಿ, ಕ್ಷುಲ್ಲಕ ಕಾರಣಕ್ಕೆ ಕರೆ ಮಾಡಿ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆ ಆಡಿಯೋ ವೈರಲ್ ಮಾಡುವವರಿಗೆ, ಅಂತಹ ಹಲವು ಕರೆಗಳನ್ನು ನಾನು ನೋಡಿದ್ದು ಅದಕ್ಕೆ ಡೋಂಟ್ ಕೇರ್ ಎಂದಿದ್ದಾರೆ. ಪೋನ್ ಕರೆ ಮಾಡಿ ಎಂಎಲ್ಎ, ಎಂಪಿ, ಡಿಸಿ, ಎಸ್ಪಿ ಅವರಿಗೆ ಹೆದರಿಸುವ ಹಾಗೆ ನಮ್ಮ ಬಳಿ ಆ ಆಟ ನಡೆಯೋದಿಲ್ಲ. ಆತ ಎಷ್ಟೇ ದೊಡ್ಡ ಮನುಷ್ಯ ಆದರೂ ನಾಳೆಯಿಂದ ಮುಲಾಜಿಲ್ಲದೆ ಜೈಲಿಗಟ್ಟುತ್ತೇನೆ ಎಂದಿದ್ದಾರೆ.
ಉಡುಪಿ ಜಿಲ್ಲೆಯ ಎಲ್ಲಾ ಅಧಿಕಾರಿ ವರ್ಗದವರು, ವೈದ್ಯಕೀಯ ಸಿಬ್ಬಂದಿಗಳೂ ಸೇರಿದಂತೆ ನಾವೆಲ್ಲ ಕಳೆದ ಮೂರು ತಿಂಗಳಿನಿಂದ ಹಗಲು ರಾತ್ರಿ ಕೆಲಸ ಮಾಡುತ್ತಿದ್ದು, ಊಟ, ತಿಂಡಿ ಬಿಟ್ಟು ನಿಮ್ಮ ಕಾಳಜಿಗಾಗಿ ದುಡಿಯುತ್ತಿದ್ದೇವೆ. ಕೊರೋನಾ ವಾರಿಯರ್ಸ್ ಗೆ ಮಾನಸಿಕ ಕಿರುಕುಳ ನೀಡುವ ವ್ಯಕ್ತಿ ಯಾರೇ ಆಗಿರಲಿ, ಅವರ ಮೇಲೆ ಕಾನೂನು ಕ್ರಮ ಖಂಡಿತ. ಮೊಸರಲ್ಲಿ ಕಲ್ಲು ಹುಡುಕುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂಬೈನಲ್ಲಿ ಕುಳಿತು ಡಾನ್ ರೀತಿಯಲ್ಲಿ ಮಾತಾಡಿದರೆ ಜಿಲ್ಲಾಡಳಿತ ಹೆದರುವುದಿಲ್ಲ. ಪೋನ್ ಕರೆ ಮಾಡಿ ಎಂಎಲ್ಎ, ಎಂಪಿ, ಡಿಸಿ, ಎಸ್ಪಿ ಅವರಿಗೆ ಹೆದರಿಸುವ ಹಾಗೆ ನಮ್ಮ ಬಳಿ ಆ ಆಟ ನಡೆಯೋದಿಲ್ಲ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕುಂದಾಪುರ ತಾ.ಪಂ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಜಗದೀಶ್ ಈ ರೀತಿಯ ಎಚ್ಚರಿಕೆಯನ್ನು ನೀಡಿದ್ದಾರೆ.
ಕ್ವಾರಂಟೈನ್ ನಲ್ಲಿ ಇರುವವರಿಗೆ ಮನೆ ಊಟ, ಬಟ್ಟೆಗಳನ್ನು ನೀಡುವ ಹಾಗಿಲ್ಲ. ಇದರಿಂದ ಸೋಂಕು ಹರಡುವ ಸಂಭವವಿದೆ. ನನಗೆ ಉಡುಪಿ ಜಿಲ್ಲೆಯ ಹದಿಮೂರು ಲಕ್ಷ ಜನರ ಆರೋಗ್ಯ ರಕ್ಷಣೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ ಗೆ ಒಳಗಾಗಿರುವವರು ಜಿಲ್ಲಾಡಳಿತದ ಜೊತೆ ಅಗತ್ಯವಾಗಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡ ಕಠಿಣ ಕ್ರಮಗಳಿಂದ ಉಡುಪಿ ಹಸಿರು ವಲಯ ಎಂದು ಗುರುತಿಸಿ ಕೊಂಡಿತ್ತು ಮತ್ತು ಜಿಲ್ಲಾಧಿಕಾರಿ ಜಗದೀಶ್ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ ನಲ್ಲಿ ಇರುವ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.








