ಶ್ರೀ ದ್ರೌಪದಿ ಪತಿವ್ರತೆಯೇ ?
ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋಧರಿ ತಥಾ।
ಪಂಚ ಕನ್ಯಾಸ್ಮರೇ ನಿತ್ಯಂಮಹಾ ಪಾತಕ ನಾಶನಮ್॥
ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋಧರಿ
ಈ ಐದು ಮಹಾಪತಿವ್ರತೆಯರನ್ನು ಯಾರು ನಿತ್ಯವೂ ಸ್ಮರಿಸುತ್ತಾರೊ ಅವರ ಮಹಾಪಾತಕಗಳು ದೂರವಾಗುತ್ತವೆ ಎಂದು ರಾಮಾಯಣ, ಮಹಾಭಾರತ, ಪುರಾಣದ ಕಥೆಗಳಿಂದ ತಿಳಿದುಬರುತ್ತದೆ. ರಾಮಾಯಣ, ಮಹಾಭಾರತ, ಪುರಾಣಗಳು ಕೇವಲ ಯಾವುದೆ ಒಂದು ಧರ್ಮಕ್ಕೆ ಸಂಬಂಧಿಸಿದ ದೇವದೇವತೆಯರ ಅವತಾರದ ಕಥೆ –ಅಥವಾ ಭಾರತದ ಇತಿಹಾಸವಾಗಿರದೆ ಕಲಿಯುಗದ ಮನುಜರಿಗೆ ಸತ್ಯ, ಧರ್ಮ ಪರಿಪಾಲನೆ ಮಾಡುತ್ತಾ ನೈಜ ಜೀವನವನ್ನು ಸನ್ಮಾರ್ಗದಲ್ಲಿ ನಡೆಸಲು ನೀತಿಯನ್ನು ತತ್ವವನ್ನು ಬೋಧಿಸುತ್ತವೆ. ವಿಶೇಷವಾಗಿ ಸ್ತೀಯರು ಈ ಪಂಚಪತಿವ್ರತೆಯರ ಕಥೆಯನ್ನು ಆದರ್ಶವಾಗಿ ಇಟ್ಟುಕೊಂಡು ತಮ್ಮ ಸಂಸಾರವನ್ನು ನಡೆಸಿದರೆ ಆಗ ಅದು ಸುಖಮಯ ಸುಂದರ ಸಂಸಾರವಾಗುತ್ತದೆ. ಆದರೆ ಇಂದಿನ ಕೆಲವು ಸ್ತೀಯರು ಪತಿವ್ರತೆಯರು ಆಚರಿಬೇಕಾದ ಧರ್ಮ ಸಂಸ್ಕೃತಿ ಸಂಸ್ಕಾರ ಆದರ್ಶ ಜೀವನವನ್ನು ಬಿಟ್ಟು ಪಾಶ್ಚಾತ್ಯ ದೇಶದ ಸಂಸ್ಕೃತಿ ಆಚರಿಸುತ್ತಿದ್ದಾರೆ. ನಮ್ಮ ತಾಯ್ನಾಡಿನ ಧರ್ಮದೇವತೆಗಳ ಅವತಾರಗಳ ಸಚ್ಚಾರಿತ್ರವನ್ನು ಕುರಿತು ಪ್ರಶ್ನಿಸುತ್ತಾರೆ. ಇದೇ ನಮ್ಮ ವಿಕೃತಿ. ಪಾಶ್ಚಾತ್ಯರು ತಮ್ಮ ಸಂಸ್ಕೃತಿಯನ್ನು ತೊರೆದು ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಾರೆ. ಇದು ಪ್ರಕೃತಿ. ಮೂಢರು ದ್ರೌಪದಿ ಒಬ್ಬಳೇ ಐದು ಜನ ಪಾಂಡವರನ್ನು ಮದುವೆಯಾದದ್ದು ಹೇಗೆ ? ಇದು ಧರ್ಮ ಸಮ್ಮತವೇ ? ಇಂಥವಳು ಪಂಚ ಪತಿವ್ರತೆಯರಲ್ಲಿ ಸೇರಲು ಸಾಧ್ಯಾವೇ ?ಎಂದು ಪ್ರಶ್ನಿಸುತ್ತಾರೆ. ಇದೊಂದು ದುರಂತ ಅಲ್ಲವೇ !
ದ್ರುಪದರಾಜನುಯಾಜ-ಉಪಯಾಜರೆಂಬ ಬ್ರಾಹ್ಮಣ ಶ್ರೇಷ್ಠರನ್ನು ಆಶ್ರಯಿಸಿ ಅವರಿಂದ ಇಷ್ಟಿಯಾಗವನ್ನು ಮಾಡಿಸಿದ. ಆಯಾಗದ ಮಧ್ಯದಿಂದ ದ್ರೌಪದಿ ಎದ್ದು ಬಂದಳು.
ಸ್ತ್ರೀಯರಲ್ಲೆಲ್ಲ ಉತ್ಕೃಷ್ಟವಾದ ಆನಂದ ಉಳ್ಳವಳಾದ್ದರಿಂದಲೂ ದ್ರೌಪದಿ ಕೃಷ್ಣೆ. ವರ್ಣದಿಂದಲೂ ಕೃಷ್ಣೆ ಎನಿಸಿದಳು.
ದ್ರೌಪದಿ ಪಾರ್ವತಿಯ ಅಂಶ ಯುಕ್ತಳಾಗಿದ್ದಳು. ಹಿಂದೆ ಪಾರ್ವತಿಯೂ ಶಚಿ ಮುಂತಾದ ದೇವಿಯರು ಒಮ್ಮೆ ಬ್ರಹ್ಮನು ನೋಡುತ್ತಿದ್ದಂತೆಯೇ ಮೂರು ಬಾರಿ ತಮ್ಮ ಪತಿಗಳೊಡನೆ ಬಹಳ ವಿಲಾಸವನ್ನು ಫ್ರದರ್ಶಿಸಿದರು. ಬ್ರಹ್ಮ ಅವರನ್ನು “ಮನುಷ್ಯ ಜನ್ಮ ಹೊಂದಿರಿ” ಎಂದು ಶಪಿಸಿದ. ನಂತರ ಇವರೆಲ್ಲರೂ ಸೇರಿ ರುದ್ರ ಹಾಗು ವಿಷ್ಣುವನ್ನು ಕುರಿತು ತಪಸ್ಸನ್ನು ಮಾಡಿದರು. ಶಾಪ ವಿಮೋಚನೆಯಾಗಿ ನಾಲ್ವರಿಗೆ ನಾಲ್ಕು ಜನ್ಮದ ಬದಲಾಗಿ ಒಂದು ಜನ್ಮದಲ್ಲಿ ಅದೇ ದೇಹದಲ್ಲಿ ನಾಲ್ಕು ಜೀವ ಇದ್ದು ಕಾಲಾಂತರದಲ್ಲಿ ಮೂಲ ರೂಪಕ್ಕೆ ಹೋಗುವಂತೆ ವರ ಪಡೆದರು. ಹೀಗೆ ದ್ರೌಪದಿ ಜನ್ಮವಾಯಿತು. ಹಾಗೆಯೇ ಮುದ್ಗಲನೆಂಬ ಮುನಿ ಬ್ರಹ್ಮನನ್ನು ಅಪಹಾಸ ಮಾಡಿ ಬ್ರಹ್ಮನಿಂದ “ನೀನು ಅಹಂಕಾರಿ” ಮನುಷ್ಯ ಜನ್ಮ ಹೊಂದಿ ಭಾರತೀ ಮುಂತಾದ ಐದು ಮಂದಿ ದೇವಿಯರ ಸಂಗ ಮಾಡು ಎಂದು ಶಾಪ ಗ್ರಸ್ತನಾದ. ನಂತರ ತಪಸ್ಸನ್ನು ಮಾಡಿ ಬ್ರಹ್ಮನ ಅನುಗ್ರಹದಿಂದ ಒಂದೇ ಜನ್ಮ ಪಡೆದ. ಹೀಗೆಯೇ ಅತ್ತ ಕುಂತಿದೇವಿಯು ಕೋಪಿಷ್ಟರಾದ ದುರ್ವಾಸರನ್ನು ತನ್ನ ಶಾಂತ ಸ್ವಭಾವದಿಂದ ಸೇವೆಗೈದು ಅವರು ಕೊಟ್ಟವರಗಳಿಂದ ಇಂದ್ರ, ಯಮ, ವಾಯುವನ್ನು ಮತ್ತು ಮಾದ್ರಿ ಅಸ್ವಿನಿದೇವತೆಗಳನ್ನು ಅವಳಿ ಮಕ್ಕಳನ್ನಾಗಿ ಪಡೆದರು. ಅವರೆ ಪಂಚ ಪಾಂಡವರು.
ಸ್ವಯಂ ವರದಲ್ಲಿ ಅರ್ಜುನ ಗೆದ್ದ ದ್ರೌಪದಿಯನ್ನು ಪಂಚ ಪಾಂಡವರು ಮದುವೆಯಾದರು. ಹೀಗೆ ಐದು ಅಂಶಗಳಿಂದ ಕೂಡಿದ ದ್ರೌಪದಿ, ಪಾಂಚಾಲಿಯಾಗಿ ಒಬ್ಬೊಬ್ಬರ ಜೊತೆ ಎರಡು ವರ್ಷಕ್ಕೊಮ್ಮೆ ಎನ್ನುವ ನಿಯಮದಂತೆ ಐದು ಅಂಶಗಳಿಂದ ಅಂದರೆ ಧರ್ಮರಾಜ = ಯಮನೊಂದಿಗೆ – ಶ್ಯಾಮಲೆಯಾಗಿ,
ವಾಯು = ಭೀಮನೊಂದಿಗೆ – ಭಾರತಿಯಾಗಿ, ಅರ್ಜುನ = ಇಂದ್ರ – ಶಚಿಯಾಗಿ, ಅವಳಿದೇವತೆಗಳಾದ ಅಶ್ವಿನಿದೇವತೆಗಳು = ನಕುಲ, ಸಹದೇವಇವರಿಬ್ಬರ
ಜೊತೆ – ಉಷೆಯಾಗಿ ಪಾತಿವ್ರತ್ಯ ಧರ್ಮವನ್ನು ಆಚರಿಸಿದಳು.
ಸ್ತ್ರೀಯರಿಗೆ ಪ್ರಾಣಕ್ಕಿಂತ ಹೆಚ್ಚು ಮಾನ ಮುಖ್ಯ.
ಅಂದು ದ್ರೌಪದಿ ನೂರಾರು ಜನ ತುಂಬಿದ ರಾಜಸಭೆಯಲ್ಲಿ ವೀರಾಧಿ-ವೀರರಾದ ಪಂಚಪಾಂಡವರ ಮುಂದೆಯೇ ವಸ್ತ್ರಾಪಹರಣವಾಗಿ ಮಾನ ಹೋದರು ಪತಿಯಂದಿರನ್ನು ಬಿಡಲಿಲ್ಲ. ಧರ್ಮರಾಜನಿಂದ ಸತ್ಯ-ಸಹನೆಯನ್ನು, ಭೀಮನಿಂದ ಧೈರ್ಯ-ಭಕ್ತಿಯನ್ನು, ಅರ್ಜುನನಿಂದ ಗುರಿ ಸಾಧಿಸುವಿಕೆಯನ್ನು, ನಕುಲ-ಸಹದೇವರಿಂದ ಸಹಬಾಳ್ವೆಯನ್ನು ಕಲಿತು ಮಹಾಪತಿವ್ರತೆಯಾಗಿ ಮೋಕ್ಷವನ್ನು ಪಡೆದಳು.
ಆದರೆ ಇಂದಿನ ಕಾಲದ ಕೆಲವು ಸ್ತೀಯರು ಪತಿ ಅಥವಾ ಪತಿಯ ಮನೆಯವರು ಒಂದು ಮಾತನಾಡಿದರೂ ಸಾಕು ಅಷ್ಟೆ ಗಂಡನಿಗೆ ವಿಛ್ಚೇದನ[ Divorce ]ಪತ್ರ ಕೊಟ್ಟು ತವರುಮನೆ ಸೇರುತ್ತಾರೆ. ಈ ಯುಗದ ಸ್ತೀಯರು ವೇದಕಾಲದ ಸ್ತೀಯರಿಂದ ತಾಳ್ಮೆ-ಸಹನೆ, ಧರ್ಮಪರಿಪಾಲನೆಯನ್ನು ಕಲಿಯಬೇಕಾಗಿದೆ.
“ ಧರ್ಮೋ ರಕ್ಷತಿ ರಕ್ಷಿತಃ ” ಎನ್ನುವ ವಾಣಿಯಂತೆ ಸತ್ಯಧರ್ಮದಿಂದ ಪತಿವ್ರತೆಯಾಗಿ ಬಾಳಿ ಮುಂದಿನ ಯುವ ಜನಾಂಗಕ್ಕೆ
ಸಂಸ್ಕೃತಿ ಸಂಸ್ಕಾರವನ್ನು ಕೊಟ್ಟರೆ ಆಗ ಮಾತ್ರ ಪ್ರತಿಯೊಬ್ಬ ನಾರಿಯರು ಪತಿವ್ರತೆಯಾಗುತ್ತಾರೆ.
ಆಗ” ಯತ್ರ ನಾರ್ಯಸ್ತು ಪೂಜ್ಯಂತೆ ತತ್ರರಮಂತೆ ದೇವತಾಃ “ಎನ್ನುವ ವಾಣಿಯಂತೆ ನಿಜವಾಗಿ ಸ್ತೀಯರನ್ನು ಪೂಜಿಸಿದಂತಾಗುತ್ತದೆ. ಅಲ್ಲಿ ದೇವತೆಗಳು ಆಶೀರ್ವದಿಸುತ್ತಾರೆ.
ವಿದ್ವಾನ್. ಆನಂದ ಪುರೋಹಿತ
ಶ್ರೀ ಕೃಷ್ಣಾರ್ಪಣ ಮಸ್ತು










