ಬೆಂಗಳೂರು, ಮೇ 24 : ವಲಸೆ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದಾಗ, ವಲಸೆ ಕಾರ್ಮಿಕನೊಬ್ಬ ಕುಸಿದು ಬಿದ್ದು, ಅಲ್ಲಿಗೆ ವೈದ್ಯಕೀಯ ಶಿಕ್ಷಣ ಸಚಿವರು ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಘಟನೆ ಅರಮನೆ ಮೈದಾನದ ಬಳಿ ನಡೆಯಿತು.
ಮಣಿಪುರ, ಒಡಿಶಾ ರಾಜ್ಯಗಳ ವಲಸೆ ಕಾರ್ಮಿಕರು ತಪ್ಪು ಮಾಹಿತಿಯಿಂದ ಬಹಳಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಗೊಂದಲ ಉಂಟಾಗಿತ್ತು. ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಸೇವಾಸಿಂಧು ಆ್ಯಪ್ ಮೂಲಕ ಒಂದೂವರೆ ಸಾವಿರ ಮಂದಿಯ ಮೊಬೈಲ್ ಗಳಿಗೆ ಸಂದೇಶ ರವಾನಿಸಲಾಗಿತ್ತು. ಆ ಸಂದೇಶ ಅವರಲ್ಲೇ ಫಾರ್ವರ್ಡ್ ಆಗಿ ಪ್ರಯಾಣಿಸಲು ಆಯ್ಕೆಯಾಗದ ಜನರೂ ನೂರಾರು ಸಂಖ್ಯೆಯಲ್ಲಿ ಸೇರಿ ಜನದಟ್ಟಣೆ ಉಂಟಾಯಿತು.
ಚಿಕ್ಕಬಳ್ಳಾಪುರದ ಕಡೆ ಹೊರಟಿದ್ದ ಸಚಿವ ಸುಧಾಕರ್ ಜನದಟ್ಟಣೆ ಗಮನಿಸಿ ಅತ್ತ ಧಾವಿಸಿ ಗೊಂದಲದ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದರು. ತಕ್ಷಣವೇ ಮುಖ್ಯ ಕಾರ್ಯದರ್ಶಿ ಸಹಿತ ಹಿರಿಯ ಅಧಿಕಾರಿಗಳ ಜತೆ ಕರೆ ಮಾಡಿ ಮಾತನಾಡಿದ ಸಚಿವರು ಗೊಂದಲ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಆದೇಶ ನೀಡಿದರು. ಈ ಸಂದರ್ಭದಲ್ಲಿ ಮೂರ್ಛೆ ರೋಗದಿಂದ ಬಳಲುತ್ತಿದ್ದ ಎರ್ಷಾದ್ ಎಂಬಾತ ಕುಸಿದು ಬಿದ್ದಾಗ ಸ್ವತಃ ವೈದ್ಯರಾಗಿರುವ ಸಚಿವ ಸುಧಾಕರ್, ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಬಳಿಕ ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಯಾರೊಬ್ಬರೂ ಆತಂಕ ಪಡಬೇಕಿಲ್ಲ. ಎಲ್ಲರನ್ನೂ ಸರ್ಕಾರದ ವೆಚ್ಚದಲ್ಲಿ ಊರಿಗೆ ಕಳುಹಿಸಿ ಕೊಡಲಾಗುವುದು. ಇದಕ್ಕೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದ ಸಚಿವರು ನಿಮ್ಮೂರಿಗೆ ಹೋಗಲು ಹೆಚ್ಚುವರಿ ಬೋಗಿಗಳನ್ನು ಒದಗಿಸಲು ರೈಲ್ವೆ ಸಚಿವರಿಗೂ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.








