Tollywood : ನಟ ಬೆಲ್ಲಂಕೊಂಡ ಶ್ರೀನಿವಾಸ್ ವಿರುದ್ಧ ವಂಚನೆ ಪ್ರಕರಣ ದಾಖಲು…!!
ಹೈದರಾಬಾದ್ : ತೆಲುಗಿನ ಸ್ಟಾರ್ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ತೆಲುಗು ಸಿನಿಮಾರಂಗದ ನಿರ್ಮಾಕರಾದ ಬೆಲ್ಲಂಕೊಂಡ ಸುರೇಶ್ ಅವರ ಪುತ್ರ.. ಸಾಕಷ್ಟು ಸಿನಿಮಾಗಳ ಮೂಲಕ ಅಭಿಮಾನಿಗಳನ್ನ ಗಳಿಸಿರುವ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ವಿರುದ್ಧ ಇದೀಗ ವಂಚನೆ ಆರೋಪ ಕೇಳಿಬಂದಿದ್ದು , ಪ್ರಕರಣ ದಾಖಲಾಗಿದೆ. ಫೈನಾನ್ಷಿಯರ್ ಗೆ 85 ಲಕ್ಷ ರೂಪಾಯಿ ವಂಚಿಸಿದ ಆರೋಪ ಅವರ ವಿರುದ್ಧ ಕೇಳಿ ಬಂದಿದೆ. ನಗರದ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೇಂದ್ರ ಅಪರಾಧ ಠಾಣೆ (ಸಿಸಿಎಸ್) ಪೊಲೀಸರು ಇಬ್ಬರ ವಿರುದ್ಧವೂ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.
2018ರಲ್ಲಿ ನಿರ್ಮಾಪಕ ಮತ್ತು ಅವರ ಪುತ್ರ ಸಿನಿಮಾ ಮಾಡಲು ತಮ್ಮಿಂದ ಕಂತುಗಳಲ್ಲಿ ಹಣ ತೆಗೆದುಕೊಂಡಿದ್ದಾರೆ ಎಂದು ವಿಎಲ್ ಶ್ರವಣ್ ಕುಮಾರ್ ದೂರಿದ್ದು , ನ್ಯಾಯಾಲಯದ ಮೊರೆ ಹೋಗಿದ್ದರು. ಮಾಲಿನೇನಿ ಗೋಪಿಚಂದ್ ಅವರ ನಿರ್ದೇಶನದಲ್ಲಿ ತಯಾರಾಗಲಿರುವ ಚಿತ್ರಕ್ಕೆ ಸಹಾಯಕ ನಿರ್ಮಾಪಕನಾಗಿ ತಮ್ಮನ್ನು ತೆಗೆದುಕೊಳ್ಳುವುದಾಗಿ ನಿರ್ಮಾಪಕರು ಭರವಸೆ ನೀಡಿದ್ದರು ಎಂದು ಸಹ ಹೇಳಿಕೊಂಡಿದ್ದಾರೆ.
ಅವರ ಮಾತನ್ನ ನಂಬಿ ಅವರಿಗೆ ಹಣ ನೀಡಿದ್ದೆ. ಆದರೆ ಅವರು ನಂಬಿಸಿ ಮೋಸ ಮಾಡಿದ್ದಾರೆ ಎಂದು ಫೈನಾನ್ಷಿಯರ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದರು. ಸುರೇಶ್ ಹಾಗೂ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿತ್ತು. ಸಿಸಿಎಸ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 417, 420 (ವಂಚನೆ), ಮತ್ತು 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.








