ಮುಂಬೈ, ಮೇ 24 : ಬಾಲಿವುಡ್ ನಟ ಕಿರಣ್ ಕುಮಾರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ವಿಚಾರವನ್ನು ಸ್ವತಃ ಅವರೇ ಬಹಿರಂಗ ಪಡಿಸಿದ್ದಾರೆ. 74 ವರ್ಷ ಪ್ರಾಯದ ಕಿರಣ್ ಕುಮಾರ್ ತಮಗೆ ಕೊರೊನಾ ಸೋಂಕು ತಗುಲಿರುವ ವಿಷಯವನ್ನು ಬಹಿರಂಗ ಪಡಿಸಿದ್ದು, ನನ್ನಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇರಲಿಲ್ಲ. ನಾನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದೆ ಮತ್ತು ಅಲ್ಲಿ ಕೊರೊನಾ ಸೋಂಕು ಪರೀಕ್ಷೆ ಕಡ್ಡಾಯವಾಗಿತ್ತು. ಹಾಗಾಗಿ ನಾನು ಆ ಪರೀಕ್ಷೆಗೆ ಒಳಗಾದೆ. ಪರೀಕ್ಷಾ ವರದಿ ಬಂದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು ಎಂದು ಹೇಳಿದ್ದಾರೆ.
ಆದರೆ ನನಗೆ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳಿಲ್ಲ. ನಾನು ಚೆನ್ನಾಗಿದ್ದೇನೆ. ಜ್ವರ, ಕೆಮ್ಮು, ಉಸಿರಿನ ತೊಂದರೆಯಾಗಲಿ ಇಲ್ಲ. ಹಾಗಾಗಿ ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಗಾಗಿದ್ದೇನೆ ಎಂದು ತಿಳಿಸಿದರು. ಈಗಾಗಲೇ ಕೊರೊನಾ ಸೋಂಕು ಪತ್ತೆಯಾಗಿ 10 ದಿನಗಳು ಕಳೆದಿದೆ ಆದರೆ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಹೇಳಿದರು. ನನ್ನ ಕುಟುಂಬವು ಎರಡನೇ ಮಹಡಿಯಲ್ಲಿದ್ದು, ನಾನು ಮೂರನೇ ಮಹಡಿಯಲ್ಲಿ ಇದ್ದೇನೆ. ಮೇ 26 ಅಥವಾ 27 ರಂದು ಎರಡನೇ ಪರೀಕ್ಷೆ ನಡೆಯಲಿದ್ದು, ಕೊರೋನಾ ಸೋಂಕಿನಿಂದ ಗುಣಮುಖರಾಗಿ ಹೊರ ಬರುವ ವಿಶ್ವಾಸವನ್ನು ನಟ ಕಿರಣ್ ಕುಮಾರ್ ವ್ಯಕ್ತಪಡಿಸಿದರು.








