ಬೆಂಗಳೂರು : ಕಳೆದ ಎರಡು ತಿಂಗಳಿನಿಂದ ಬಂದ್ ಆಗಿದ್ದ ವಿಮಾನ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇಂದಿನಿಂದ ಆಗಸದಲ್ಲಿ ಲೋಹದ ಹಕ್ಕಿಗಳು ಹಾರಾಡಲಿವೆ. ಜೊತೆಗೆ ಕೊರೊನಾ ವೈರಸ್ ಭಯವೂ ಕೂಡ ಶುರುವಾಗಿದೆ.
ಕಳೆದ ವಾರ ಏರ್ ಲಿಫ್ಟ್ ಮೂಲಕ ವಿದೇಶದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯರನ್ನ ಕರೆಸಿಕೊಂಡಿದೆ. ಇದರಲ್ಲಿ ಬೆಂಗಳೂರಿಗೆ ಆಗಮಿಸಿದ ಇಬ್ಬರಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ. ಈಗ ಇಂದಿನಿಂದ ಡೊಮೆಸ್ಟಿಕ್ ಏರ್ ಲೈನ್ಸ್ ಆರಂಭವಾಗುತ್ತಿರುವುದು ರಾಜ್ಯಕ್ಕೆ ಕೊರೊನಾ ಕಂಟಕವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಇನ್ನು ಇಂದಿನಿಂದ ಜೂನ್ 30ರವರೆಗೂ ವಿಮಾನಗಳ ಹಾರಾಟಕ್ಕೆ ಮೊದಲ ಹಂತದ ಅನುಮತಿ ನೀಡಲಾಗಿದೆ. ಬೆಂಗಳೂರಿಗೆ ಪ್ರತಿನಿತ್ಯ 215 ವಿಮಾನಗಳು ನಿರ್ಗಮನ ಮತ್ತು ಆಗಮನವಾಗಲಿವೆ. ಪ್ರತಿ 10 ನಿಮಿಷಕ್ಕೆ ಒಂದರಂತೆ ವಿಮಾನಗಳು ಟೆಕ್ ಆಫ್ ಆಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನಕ್ಕೆ ಅನುಗುಣವಾಗಿ ವಿಮಾನಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ.
ವಿಮಾನಗಳ ಹಾರಾಟಕ್ಕೆ, ವಿಮಾನ ಪ್ರಯಾಣಿಕರಿಗೆ ನಿಯಮಗಳೇನು ಗೊತ್ತಾ..?
ವಿಮಾನ ಹಾರಾಟಕ್ಕೆ ಸರ್ಕಾರ ಅನುಮತಿ ಜೊತೆಗೆ ಕೆಲ ನಿಯಮಗಳನ್ನು ವಿಧಿಸಿದ್ದು, ಕಟ್ಟು ನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದೆ.
* ವಿಮಾನಗಳ ಮೂಲಕ ರಾಜ್ಯಕ್ಕೆ ಬರುವವರು ಕಡ್ಡಾಯ ಕ್ವಾರಂಟೈನ್ ನಲ್ಲಿರಬೇಕು.
* ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ ರಾಜ್ಯಗಳಿಂದ ಬರೋರಿಗೆ 7 ದಿನ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮತ್ತು 7 ದಿನ ಕಡ್ಡಾಯ ಹೋಂ ಕ್ವಾರಂಟೈನ್.
* ಉಳಿದ ರಾಜ್ಯಗಳಿಂದ ಬರೋರಿಗೆ 14 ದಿನ ಹೋಂ ಕ್ವಾರಂಟೈನ್ ಕಡ್ಡಾಯ.
* ಸ್ವತ: ಪ್ರಯಾಣಿಕರೇ ಹೊಟೇಲ್ ವೆಚ್ಚ ಭರಿಸಬೇಕು.
* ಬ್ಯುಸಿನೆಸ್ ಉದ್ದೇಶಕ್ಕೆ ಬರೋರು ಕೊರೊನಾ ನೆಗೆಟಿವ್ ರಿಪೋರ್ಟ್ ಸಲ್ಲಿಸಿದರೆ ಪ್ರಯಾಣಕ್ಕೆ ಅವಕಾಶ.
* ರಾಜ್ಯದೊಳಗೆ ಯಾರೇ ಬಂದರೂ ಸೇವಾಸಿಂಧು ಮೂಲಕ ಪಡೆದಿರುವ ಇ-ಪಾಸ್ ಸಲ್ಲಿಸತಕ್ಕದ್ದು.
ಒಟ್ಟಿನಲ್ಲಿ ಇಂದಿನಿಂದ ವಿಮಾನಯಾನ ಶುರುವಾಗ್ತಿದ್ದು ಬೇರೆ ರಾಜ್ಯದಿಂದ ಬರುವವರು ನಮ್ಮ ರಾಜ್ಯಕ್ಕೆ ಕೊರೊನಾ ತರದೇ ಇದ್ದರೆ ಸಾಕು.








