ಡ್ರಗ್ಸ್ ಆನ್ ಕ್ರೂಸ್ ಪ್ರಕರಣ – ಚಾರ್ಜ್‌ಶೀಟ್ ಸಲ್ಲಿಸಲು NCB ಗೆ ಇನ್ನೂ 60 ದಿನ ಕಾಲಾವಕಾಶ
ಕಳೆದ ವರ್ಷ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 20 ಮಂದಿಯನ್ನು ಬಂಧಿಸಲಾಗಿದ್ದ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ ಇನ್ನೂ 60 ದಿನಗಳ ಕಾಲಾವಕಾಶ ನೀಡಲಾಗಿದೆ. ಡ್ರಗ್ಸ್ ವಿರೋಧಿ ಸಂಸ್ಥೆ, ನ್ಯಾಯಾಲಯದಿಂದ 90 ದಿನಗಳ ಕಾಲಾವಕಾಶವನ್ನು ಕೋರಿತ್ತು.
ಸುಮಾರು ಎರಡು ಗಂಟೆಗಳ ಕಾಲ ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ಬುಧವಾರ ಆದೇಶವನ್ನು ಕಾಯ್ದಿರಿಸಿತ್ತು. ಎನ್‌ಸಿಬಿ ಸುಮಾರು ಆರು ತಿಂಗಳಿನಿಂದ ಪ್ರಕರಣದ ತನಿಖೆ ನಡೆಸುತ್ತಿದೆ ಮತ್ತು ಆರೋಪಪಟ್ಟಿ ಸಲ್ಲಿಸಲು ನಿಗದಿತ ಸಮಯ – 180 ದಿನಗಳು – ಇಂದಿಗೆ ಕೊನೆಗೊಂಡಿತ್ತು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅದ್ವೈತ್ ಸೇಠ್ನಾ ಅವರ ಮೂಲಕ ಎನ್‌ಸಿಬಿಯ ವಿಶೇಷ ತನಿಖಾ ತಂಡವು (ಎಸ್‌ಐಟಿ) ಕಳೆದ 180 ದಿನಗಳಲ್ಲಿ ಸಂಸ್ಥೆ ಮಾಡಿರುವ ಕೆಲಸದ ವಿವರಗಳನ್ನು ನೀಡಿದೆ.
ಪುಣೆಯ ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಕಳುಹಿಸಲಾದ 17 ಮಾದರಿಗಳ ಫೋರೆನ್ಸಿಕ್ ವರದಿಗಳು ಬಂದಿವೆ ಮತ್ತು ವರದಿಗಳ ಪ್ರಕಾರ, ಮಾದರಿಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯ ವ್ಯಾಪ್ತಿಯಲ್ಲಿ ವ್ಯಾಖ್ಯಾನಿಸಲಾದ ಮಾದಕವಸ್ತುಗಳು ಅಥವಾ ಸೈಕೋಟ್ರೋಪಿಕ್ ಡ್ರಗ್ಸ್ ಇದ್ದವು ಎಂದು ಸೇಥ್ನಾ ಹೇಳಿದ್ದಾರೆ.
ಪ್ರಕರಣದಲ್ಲಿ ಸಂಸ್ಥೆಯು ಇದುವರೆಗೆ 69 ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. 10 ಸ್ವತಂತ್ರ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ನಾಲ್ವರನ್ನು ಇನ್ನೂ ವಿಚಾರಣೆಗೊಳಪಡಿಸಬೇಕಿದೆ.
ಕಳೆದ ವರ್ಷ ಅಕ್ಟೋಬರ್ 2 ರಂದು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮುಂಬೈ ಕರಾವಳಿಯ ಕ್ರೂಸ್ ಹಡಗುಗಳ ಮೇಲೆ ದಾಳಿ ನಡೆಸಿ ಆರ್ಯನ್ ಖಾನ್, ಅವರ ಸ್ನೇಹಿತ ಮತ್ತು ಇತರ ಆರು ಮಂದಿಯನ್ನು ಬಂಧಿಸಿತ್ತು. ಮರುದಿನ, ಮಾದಕವಸ್ತು ಸಂಬಂಧಿತ ಆರೋಪದ ಮೇಲೆ ಆರ್ಯನ್ ಖಾನ್ ಅವರನ್ನು ಬಂಧಿಸಲಾಯಿತು ಮತ್ತು 25 ದಿನಗಳ ನಂತರ ಜಾಮೀನು ನೀಡಲಾಯಿತು.








