ನವದೆಹಲಿ : ದೇಶಕ್ಕೆ ಕೊರೊನಾ ಕಾಲಿಟ್ಟ ಆರಂಭದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಿದ್ದ ಕೇಂದ್ರ ಸರ್ಕಾರ, ಕಂಗೆಟ್ಟಿದ್ದ ದೇಶದ ಆರ್ಥಿಕತೆಗೆ ಮುಕ್ತಿ ನೀಡಲು ವಿನಾಯಿತಿ ಲಾಕ್ ಡೌನ್ ಘೋಷಿಸಿ ಮಹಾ ಎಡವಟ್ಟು ಮಾಡಿದಂತೆ ಕಾಣುತ್ತಿದೆ. ಮೇ 18 ರಿಂದ ದೇಶದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಸೋಂಕಿತರ ಪ್ರಮಾಣ ಗಣನೀಯ ಏರಿಕೆ ಕಾಣುತ್ತಿದೆ.
ದೇಶದಲ್ಲಿ ಲಾಕ್ ಡೌನ್ 4.0 ಜಾರಿಯಾಗಿ ನಿನ್ನೆಗೆ ಎಂಟು ದಿನಗಳು ಕಳೆದಿವೆ. ಈ ಎಂಟು ದಿನಗಳಲ್ಲಿ ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 47,918 ಪ್ರಕರಣಗಳು ಪತ್ತೆಯಾಗಿವೆ. ಹಿಂದಿನ ಮೂರು ಲಾಕ್ ಡೌನ್ ಅವಧಿಯಲ್ಲಿ ಎಂಟು ದಿನಗಳಲ್ಲಿ ಇಷ್ಟು ಪ್ರಕರಣ ದಾಖಲಾಗಿದ್ದ ಉದಾಹರಣೆಗಳಿಲ್ಲ.
ಈ ಎಂಟು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ 16,474, ತಮಿಳುನಾಡಿನಲ್ಲಿ 5,771, ದೆಹಲಿಯಲ್ಲಿ 3,500, ಗುಜರಾತ್ ನಲ್ಲಿ 3,071, ಮಧ್ಯಪ್ರದೇಶದಲ್ಲಿ 1,885, ರಾಜಸ್ಥಾನದಲ್ಲಿ 2,084 ಕರ್ನಾಟಕದಲ್ಲಿ 1,035 ಸೋಂಕು ಪ್ರಕರಣಗಳು ದಾಖಲಾಗಿವೆ.
ಕಾರಣವೇನಿರಬಹುದು?
ದೇಶದಲ್ಲಿ ಲಾಕ್ ಡೌನ್ 4.0 ಜಾರಿಯಾದ ಎಂಟು ದಿನಗಳಲ್ಲಿ ಅಂತರ ರಾಜ್ಯಗಳ ಗಡಿ ಓಪನ್ ಮಾಡಿ ಬಸ್, ಟ್ರೈನ್ ಸಂಚಾರ ಆರಂಭಿಸಿದೆ. ಈ ಹಿನ್ನೆಲೆ ಪ್ರಯಾಣಿಕರ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಇದು ದೇಶದಲ್ಲಿ ಕೊರೊನಾ ಸೋಂಕು ಏರಿಕೆಗೆ ಕಾರಣವಾಗಿದೆ. ಸದ್ಯ ಪ್ರತಿದಿನ ಸುಮಾರು 6,000 ಪ್ರಕರಣಗಳು ಪತ್ತೆಯಾಗುತ್ತಿವೆ. ಮೇ ಅಂತ್ಯಕ್ಕೆ 30 ಸಾವಿರ ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿದ್ದು, ನಾಲ್ಕನೇ ಲಾಕ್ ಡೌನ್ ಅವಧಿಯಲ್ಲಿ ಬಹುತೇಕ 80 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಅಂದಾಜು ಮಾಡಿದೆ.
ಇನ್ನು ಕರ್ನಾಟಕದ ವಿಷಯಕ್ಕೆ ಬಂದರೇ ಲಾಕ್ ಡೌನ್ 4.0 ರ ಈ ಎಂಟು ದಿನದಲ್ಲಿ 1,035 ಪ್ರಕರಣಗಳು ಪತ್ತೆಯಾಗಿದ್ದು, ಪ್ರತಿ ನಿತ್ಯ ಸರಾಸರಿ 130 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ.








