ಮೊರಾದಾಬಾದ್ : ಕೊರೊನಾ ಲಾಕ್ ಡೌನ್ ನಿಂದಾಗಿ ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡುವಲ್ಲಿ ಸರ್ಕಾರಗಳು ವಿಫಲವಾಗಿದೆ. ಏತನ್ಮಧ್ಯೆ ಲಾಕ್ ಡೌನ್ ನಿಂದಾಗಿ ಉತ್ತರ ಪ್ರದೇಶಕ್ಕೆ ಮರಳುತ್ತಿರುವ ವಲಸೆ ಕಾರ್ಮಿಕರಿಗೆ ಮೊರಾದಾಬಾದ್ ನ ರೈಲ್ವೆ ನಿಲ್ದಾಣದಲ್ಲಿ ಆರ್‌ಎಸ್‌ಎಸ್ ಸದಸ್ಯರು ಆಹಾರ ತಯಾರಿಸಿ ಉಚಿತವಾಗಿ ವಿತರಿಸುತ್ತಿದ್ದಾರೆ.
ಕಾರ್ಮಿಕರಿಗಾಗಿ ರೈಲು ನಿಲ್ದಾಣಗಳಲ್ಲಿ ಅಡುಗೆ ಮಾಡಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ. ರೈಲುಗಳಲ್ಲಿ ಬರುವ ವಲಸೆ ಕಾರ್ಮಿಕರಿಗೆ ಆರ್ ಎಸ್ ಎಸ್ ಸದಸ್ಯರು ಆಹಾರದ ಪೊಟ್ಟಣ ಮತ್ತು ನೀರಿನ ಬಾಟಲ್ ಗಳನ್ನು ನೀಡುತ್ತಿದ್ದಾರೆ.
ಇಲ್ಲಿಯವರೆಗೂ ಸುಮಾರು 10 ಸಾವಿರ ವಲಸೆ ಕಾರ್ಮಿಕರಿಗೆ ನೀರಿನ ಬಾಟಲ್ ಮತ್ತು ಆಹಾರ ವಿತರಿಸಲಾಗಿದೆ. ಮೇ 31ರ ವರೆಗೂ ಈ ತಾತ್ಕಾಲಿಕ ಅಡುಗೆಮನೆ ಕಾರ್ಯನಿರ್ವಹಿಸಲ್ಲಿದ್ದು, ಪ್ರತಿ ದಿನ 10 ಸಾವಿರದಿಂದ 12 ಸಾವಿರದ ವರೆಗೆ ಬಡ ವಲಸೆ ಕಾರ್ಮಿಕರಿಗೆ ಆಹಾರ ವಿತರಿಸುವುದು ನಮ್ಮ ಗುರಿಯಾಗಿದೆ ಎಂದು ಎಂದು ಆರ್‌ಎಸ್‌ಎಸ್‌ನ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಜೈನ್ ತಿಳಿಸಿದ್ದಾರೆ.
ಇನ್ನು ಅಡಿಗೆ ತಯಾರಿಕೆಗಾಗಿ 400 ಸ್ವಯಂಸೇವಕರು ಇದಕ್ಕಾಗಿ ಶ್ರಮಿಸುತ್ತಿದ್ದು, ಆಹಾರ ತಯಾರಿಸುವ ವೇಳೆ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಮಾಸ್ಕ್ ಧರಿಸಿ ಕರ್ತವ್ಯ ನಿರ್ವಹಿಸಲಾಗುತ್ತಿದೆ.








