ತಂಪಾಗಿ ಬೀಸೊ ತಂಗಾಳಿಗೆ ಮೈಯೊಡ್ಡಬೇಕೆಂಬ ಮನಸು. ಆಗಸದಿ ಹಾರುವ ಹಕ್ಕಿಯ ಕಂಡು ಮನದಲ್ಲೇನೋ ತಲ್ಲಣ. ನಾನೊಮ್ಮೆಹಾರಿಬಿಡಲೆ ಹಕ್ಕಿಯಂತೆ ಎಲ್ಲವ ಮರೆತು. ಯೋಚಿಸಲು ಏನೂ ಇಲ್ಲ, ಯೋಚಿಸದ್ದಿದ್ದರೂ ನನ್ನವರೆನ್ನುವವರು ಯಾರೂ ಇಲ್ಲ ಎಂದು ಹೇಳುತಿರುವ ಮನಸು.. ಏಕಾಗಿ ಈ ಒಂಟಿತನ ಅರಿಯದಾಗಿದೆ ಮನಸು. ಜೊತೆ ನೂರಾರು ಮಂದಿಯಿದ್ದರೂ ಯಾರು ನನ್ನವರಲ್ಲವೆನ್ನುವ ಭಾವನೆ.. ಒಬ್ಬಂಟಿಯಾಗಿ ಇದ್ದೋ ಏನೋ, ಇನ್ನೂ ಒಪ್ಪುತ್ತಿಲ್ಲ ಮನಸ್ಸು ಇವರೆಲ್ಲ ನನ್ನವರೆಂದು.. ಹೀಗೆ ಯೋಚನೆಯ ಕಡಲಲ್ಲಿ ತೇಲುತಿರುವವರೇ ಈ ನನ್ನ ಲೇಖನದ ಕರ್ತೃಗಳು. ಹುಡುಕ ಹೊರಟವರಿವರು ಕೈಗೆಟಕದ ಚಂದ್ರನ ಕೈಯಲ್ಲಿ ತರಲೆಂದು.. ಕಾಲೆಳೆಯುವ ಜನರ ನಡುವೆ ತಲೆಯೆತ್ತಬೇಕೆಂದು ಹೆತ್ತವರ ಬಿಟ್ಟು ದೂರದೂರಿಗೆ.. ಓಡುತ್ತಿರುವ ಜಗದೆದುರಲ್ಲಿ ಓಟಕ್ಕೆ ನಿಂತವರು.. ಪ್ರೀತಿ ವಿಶ್ವಾಸ ನಂಬಿಕೆಯೆಂಬ ಅಮೂಲ್ಯ ರತ್ನವ ಮರೆತು ಬದುಕೆಂಬ ಬವಣೆಯ ಏಕಾಂಗಿಯಾಗಿ ಕಳೆಯಲೆಂದು ಹೊರಟವರಿವರು..
ಅದೊಮ್ಮೆ ಕೈಯ ತುತ್ತ ಉಣಿಸ ಬಂದ ತಾಯ ಕೈಯ ತುತ್ತ ಚೆಲ್ಲಿ.. ಅವಳ ಪ್ರೀತಿಯ ಮಾತ ಕೇಳಿಸಿಯೂ ಕೇಳದಂತೆ ಹೋದವರು..
ಅಪ್ಪನ ಅಕ್ಕರೆಯ ಮರೆತು ಆಕಾಶದೆತ್ತರಕ್ಕೆ ಹಕ್ಕಿಯಂತೆ ಹಾರಿ ಹೊರಟವರು..
ನೀ ಹಾಕುವ ಒಂದು ಹೊತ್ತಿನ ಗಂಜಿಯಾದರು ನಿನ್ನೊಂದಿಗಿರುವೆ ಮಗನೆ, ಬಿಟ್ಟು ಹೋಗದಿರು ಎಂದು ಅಂಗಲಾಚಿದ ಹೆತ್ತವ್ವನ ವೃದ್ಧಾಶ್ರಮವೆಂಬ ತಾಯ ಪಾಲಿನ ಮಸಣದಲಿ ಬಿಟ್ಟು ಹಿಂತಿರುಗಿಯೂ ನೋಡದೆ ಇನ್ನೆಂದು ಬರಲಾರೆನಮ್ಮ ಎನ್ನುವ ಸತ್ಯವ ತಿಳಿಸದೆ..
ಆದಷ್ಟು ಬೇಗ ಬರುವೆಯೆಂಬ ಸುಳ್ಳು ಭರವಸೆಯಲೇ ತಾಯ ಮನಸ ನೋಯಿಸಿದವರು..
ಹುಡುಕುತಿರುವರಿಂದು ನೆಮ್ಮದಿಯ ಜೀವನವ.. ತಡವರಿಸುತಿರುವರಿಂದು ಕಾರಣ ನೋವ ಹಂಚಿಕೊಳ್ಳಲು ಯಾರು ನನ್ನವರಿಲ್ಲ ಎಂದು..
ಹುಡುಕುತಲೆ ದಿನ ಕಳೆಯುತಿರುವರಿಂದು ಯಾರು ನನ್ನವರೆಂದು.. ನಾನೇಕೆ ಒಂಟಿಯಾದೆನೆಂದು..
ಅಂದು ತನ್ನವರ ಬಿಟ್ಟು ಹೋದ ಬದುಕ ಮತ್ತೆ ಪಡೆಯಲೆಂದು ಬಂದಿಹರು.. ಕಟ್ಟಿದ್ದ ಗೂಡನರಸಿ.. ಹೆತ್ತವರ ಕನಸಿನ ಗೂಡು ಹಾಗೇ ಇದ್ದರೂ ಗೂಡೊಳಗಿನ ರಾಜ ರಾಣಿಯು ಮರೆಯಾಗಿಹರೆಂದು ಅರಿಯದೆ.. ಕಲಿಯುಗವಿದು ತಪ್ಪಿಗೆ ಶಿಕ್ಷೆ ಇದೆ ಈ ಜನುಮದಲೆ ಎಂದು ಅರಿತಿದ್ದರೂ ಕ್ಷಮಿಸಲಾಗದ ತಪ್ಪ ಮಾಡಿ
ಕ್ಷಮೆಯ ಕೇಳಿದರೇನು ಪ್ರಯೋಜನ ? ಹೆತ್ತವರ ಕಣ್ಣೊರೆಸುವ ಕೈಯಾಗದೆ ಕಣ್ಣೀರಲ್ಲಿ ಕೈಯ ತೊಳೆಸಿದ ಪಾಪ ಮರೆಯಾಗಬಹುದೆ?
ಏಕಾಂತವೇ ಸೊಗಸು, ಒಬ್ಬಂಟಿಯಾಗಲೆಂದೇ ಹೊರಟು ಇಂದು ತನ್ನವರ ಹುಡುಕುತಿರುವ ಮೂರ್ಖ ಜನರು.. ಮನದ ತಲ್ಲಣವ ಹಂಚಿಕೊಳ್ಳಲು ಮನವನರಸುತ ಹುಡುಕಾಡುತಿರುವವರು..
ಹುಡುಕಿದರೆ ಸಿಗಬಹುದೇನೋ ಕಾರಣ ಈ ಒಂಟಿತನಕೆ… ಮರುಕ ಪಡಬಹುದು ಮನಸು ಒಂದೊಮ್ಮೆ ಯೋಚಿಸಿದಾಗ ಮರೆಯಾದವರಾರು ನಮ್ಮಿಂದ ಎಂದು… ಆದರೆ ಕಾರಣ ಸಿಗುವುದೊಂದೆ ಎಲ್ಲವ ಕಾಲಲೇ ತುಳಿದು ಬಿಟ್ಟು ಬಂದವರು ನಾವೆಂದು… ನಾ ಹೆತ್ತ ಮಗನಿರುವನೆಂದು ಅವನ ಬದುಕ ಕನಸ ಹೊತ್ತಿದ್ದ ತಾಯಿಯೆಂದೂ ಒಂಟಿಯಾಗಿರಲಿಲ್ಲ. ಮಗನಿರುವನು ನನಗೆ ಎನ್ನುವ ಅವಳ ಪ್ರೀತಿ ಅವಳನೆಂದು
ಒಂಟಿಯಾಗಿಸಲಿಲ್ಲ.. ಯೋಚಿಸಿದಾಗ ಒಂಟಿಯಾದುದು ಯಾರು? ತಾಯ ಪ್ರೀತಿಯ ಮರೆತು ದೂರದಲೆಲ್ಲೋ ಅವಳ ನೆನಪು ಬಾರದಂತೆ ಬದುಕಿದವರು.. ಹುಡುಕಿದರೆ ಸಿಗಬಹುದೇನೋ ಕಾರಣ ಒಂಟಿತನಕೆ.. ಇಂದಿಗೂ ಕಾಲವಿನ್ನೂ ಮಿಂಚಿಲ್ಲ ಯೋಚನೆಯ ಕಡಲಿಂದ ಒಮ್ಮೆ ಹೊರಬಂದು ಯೋಚಿಸು ಮನವೇ, ಯೋಚನೆಯಲೇ ನೀ ಮರೆತ ಇನ್ನೊಂದು ಹ್ರದಯ ಇನ್ನು ನಿನ್ನ ನೆನಪಲ್ಲೆ ಕಾಯುತಿರಬಹುದು… ನೀ ಬರುವೆಯೆಂದು ನಿನ್ನ ಮಾತ ಕೇಳುವ ಕಿವಿಯಾಗಲು..
ಶ್ವೇತಾ.S. ದೇವಾಡಿಗ ಕಾಂತಾವರ








