ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಮುಂದೂಡುವುದು ಪಕ್ಕಾ ಆಗಿದೆ. ಐಸಿಸಿಯ ಉನ್ನತ ಮೂಲಗಳ ಪ್ರಕಾರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ 2022ಕ್ಕೆ ನಡೆಯಲಿದೆ. ಹೀಗಾಗಿ ಅಕ್ಟೋಬರ್ ನಲ್ಲಿ ಐಪಿಎಲ್ ಟೂರ್ನಿ ನಡೆಯುವ ಸಾಧ್ಯತೆ ಹೆಚ್ಚಿದೆ.
ಆದ್ರೆ ಈ ಬಗ್ಗೆ ಅಂತಿಮ ತೀರ್ಮಾನ ಮೇ 28ರಂದು ನಿರ್ಧಾರವಾಗಲಿದೆ. ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಹಾಗೂ ವಿವಿಧ ದೇಶಗಳ ಕ್ರಿಕೆಟ್ ಟೂರ್ನಿಗಳ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಿದೆ. ಅಲ್ಲದೆ ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸಿರುವುದರಿಂದ ಕ್ರಿಕೆಟ್ ಟೂರ್ನಿಗಳನ್ನು ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ.
ಈಗಾಗಲೇ ಟಿ-ಟ್ವೆಂಟಿ ಕ್ರಿಕೆಟ್ ಟೂರ್ನಿಯನ್ನು ಮುಂದೂಡಿದ್ರೆ ಇದೇ ವೇಳೆಯಲ್ಲಿ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿತ್ತು. ಒಂದು ವೇಳೆ ಐಪಿಎಲ್ ಟೂರ್ನಿ ನಡೆದ್ರೆ ವಿದೇಶಿ ಆಟಗಾರರು ಭಾಗವಹಿಸ್ತಾರಾ ಇಲ್ವೋ ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿದೆ. ಅದೂ ಅಲ್ಲದೆ ಮೈದಾನದಲ್ಲಿ ಪ್ರೇಕ್ಷಕರಿಲ್ಲದೆ ಐಪಿಎಲ್ ಟೂರ್ನಿಯನ್ನು ಸಂಘಟಿಸುವ ಲೆಕ್ಕಚಾರವನ್ನು ಬಿಸಿಸಿಐ ಹಾಕೊಂಡಿದೆ.
ಈ ನಡುವೆ ಕೆಲವು ಮಾಜಿ ಕ್ರಿಕೆಟಿಗರು ಐಪಿಎಲ್ ಟೂರ್ನಿಯನ್ನು ಸಂಘಟಿಸುವುದರ ಬಗ್ಗೆ ಅಪಸ್ವರವನ್ನು ಕೂಡ ಎತ್ತಿದ್ದಾರೆ. ಆದ್ರೆ ವಿದೇಶಿ ಆಟಗಾರರು ಸೇರಿದಂತೆ ಭಾರತೀಯ ಆಟಗಾರರು ಐಪಿಎಲ್ ಟೂರ್ನಿಯನ್ನು ಎದುರು ನೋಡ್ತಾ ಇದ್ದಾರೆ. ಐಪಿಎಲ್ ಟೂರ್ನಿ ಸದ್ಯ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯಾಗಿದೆ. ಇಲ್ಲಿ ಆಟಗಾರರು ಕೋಟಿ ಕೋಟಿ ಲೆಕ್ಕದಲ್ಲಿ ಹಣ ಪಡೆದುಕೊಳ್ಳುತ್ತಾರೆ. ಫ್ರಾಂಚೈಸಿಗಳ ಬೊಕ್ಕಸಕ್ಕೂ ಹಣ ತುಂಬುತ್ತೆ. ದೊಡ್ಡಣ್ಣ ಬಿಸಿಸಿಐ ಖಜಾನೆ ಕೂಡ ತುಂಬಿ ತುಳುಕುತ್ತೆ. ಹೀಗಾಗಿ ಬಿಸಿಸಿಐಗೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗಿಂತಲೂ ಐಪಿಎಲ್ ಟೂರ್ನಿ ಹೆಚ್ಚು ಮಹತ್ವದ್ದಾಗಿದೆ,








