ಬೆಳಗಾವಿಯಲ್ಲಿ ‘ಜೈಲ್ ಭರೋ’ ಚಳವಳಿ ನಡೆಸಿದ 1,000ಕ್ಕೂ ಹೆಚ್ಚು ರೈತರ ವಶ; ಸೆಕ್ಷನ್ 163 ಜಾರಿ, ರೈತ ಮುಖಂಡರ ಬಂಧನಕ್ಕೆ ತೀವ್ರ ಖಂಡನೆ
ಬೆಂಗಳೂರು: ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸಿದ ಅನ್ನದಾತರಿಗೆ ಪರಿಹಾರ ನೀಡುವ ಬದಲು ಪೊಲೀಸ್ ದಬ್ಬಾಳಿಕೆ ನಡೆಸಿರುವ ಕಾಂಗ್ರೆಸ್ ಸರ್ಕಾರದ ರೈತವಿರೋಧಿ ಧೋರಣೆ ಮತ್ತೊಮ್ಮೆ ಬಯಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಬ್ಬಿಗೆ ಪ್ರತಿ ಟನ್ಗೆ ₹5,500 ಬೆಂಬಲ ಬೆಲೆ ನೀಡಬೇಕು ಹಾಗೂ ಬಾಕಿ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ‘ಜೈಲ್ ಭರೋ’ ಚಳವಳಿ ನಡೆಸಿದ 1,000ಕ್ಕೂ ಹೆಚ್ಚು ರೈತರನ್ನು ಸರ್ಕಾರ ವಶಕ್ಕೆ ಪಡೆದಿರುವುದು ಖಂಡನೀಯ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ನಿಷೇಧಾಜ್ಞೆ, ಪೊಲೀಸ್ ಬಲಪ್ರಯೋಗ ಮತ್ತು ಬಂಧನದ ಮೂಲಕ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವುದು ಯಾವ ರೀತಿಯ ಪ್ರಜಾಪ್ರಭುತ್ವ ಎಂದು ಅವರು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ರೈತರ ಆಕ್ರೋಶಕ್ಕೆ ನಿಮ್ಮ ಸರ್ಕಾರ ನೀಡುತ್ತಿರುವ ಉತ್ತರವೇನು? ನ್ಯಾಯಯುತ ಬೇಡಿಕೆ ಮುಂದಿಟ್ಟ ರೈತರ ಹೋರಾಟವನ್ನು ಹತ್ತಿಕ್ಕಲು ಸೆಕ್ಷನ್ 163 ಜಾರಿಗೊಳಿಸಿ ಪೊಲೀಸ್ ಬಲಪ್ರಯೋಗ ಮಾಡಿದ್ದೇಕೆ? ಮುಂಜಾಗ್ರತಾ ಕ್ರಮದ ಹೆಸರಿನಲ್ಲಿ ರೈತ ಮುಖಂಡರನ್ನು ಬಂಧಿಸಿ ಕಿರುಕುಳ ನೀಡುತ್ತಿರುವುದೇಕೆ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಕಬ್ಬಿನ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಸಕ್ಕರೆ ಕಾರ್ಖಾನೆಗಳ ಹಿತಾಸಕ್ತಿಗೆ ಮಣೆ ಹಾಕಿ ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ. ಅಷ್ಟೇ ಅಲ್ಲದೆ, ಮಧ್ಯರಾತ್ರಿ ವಶಕ್ಕೆ ಪಡೆದ ರೈತರನ್ನು ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ಬಿಟ್ಟುಬಂದಿರುವುದು ಅಮಾನವೀಯ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಾಗ ಪ್ರಜಾಪ್ರಭುತ್ವ, ಪ್ರತಿಭಟನೆಯ ಹಕ್ಕು ಮತ್ತು ರೈತರ ಸ್ವಾತಂತ್ರ್ಯದ ಬಗ್ಗೆ ದೊಡ್ಡದಾಗಿ ಮಾತನಾಡುವ ಕಾಂಗ್ರೆಸ್ ನಾಯಕರು, ಕರ್ನಾಟಕದಲ್ಲಿ ರೈತರು ತಮ್ಮ ಹಕ್ಕಿಗಾಗಿ ಧ್ವನಿ ಎತ್ತಿದಾಗ ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವುದೇಕೆ? ಅನ್ನದಾತರ ಬೆವರಿನ ದುಡಿಮೆಗೆ ನ್ಯಾಯ ಕೇಳುವುದೂ ಈ ಸರ್ಕಾರದ ಆಡಳಿತದಲ್ಲಿ ಅಪರಾಧವೇ ಎಂದು ಅಶೋಕ್ ಕಿಡಿಕಾರಿದ್ದಾರೆ.
ರೈತರ ಬೆಳೆಗೆ ನ್ಯಾಯಯುತ ಬೆಲೆ ನೀಡದ, ಬಾಕಿ ಹಣ ಕೊಡಿಸದ, ಅವರ ಧ್ವನಿಗೂ ಕಿವಿಗೊಡದ ಸರ್ಕಾರಕ್ಕೆ ರೈತಪರ ಎಂದು ಕರೆದುಕೊಳ್ಳುವ ನೈತಿಕತೆ ಎಲ್ಲಿದೆ? ರೈತರನ್ನು ಬಂಧಿಸಬಹುದು, ಅವರ ಹೋರಾಟವನ್ನು ತಾತ್ಕಾಲಿಕವಾಗಿ ಹತ್ತಿಕ್ಕಬಹುದು. ಆದರೆ ಅನ್ನದಾತರ ಆಕ್ರೋಶ ಮತ್ತು ನ್ಯಾಯದ ಹಕ್ಕಿನ ಧ್ವನಿಯನ್ನು ಶಾಶ್ವತವಾಗಿ ದಮನಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಸರ್ಕಾರ ಕೂಡಲೇ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು. ರೈತರಿಗೆ ಬರಬೇಕಿರುವ ಬಾಕಿ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ವಶಕ್ಕೆ ಪಡೆದ ರೈತರಿಗೆ ನ್ಯಾಯ ಒದಗಿಸಬೇಕು. ಪೊಲೀಸ್ ಬಲದ ಮೂಲಕ ಆಡಳಿತ ನಡೆಸುವುದನ್ನು ಬಿಟ್ಟು ಅನ್ನದಾತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.
ರೈತರ ಶಾಪ ಮತ್ತು ಆಕ್ರೋಶಕ್ಕೆ ಗುರಿಯಾಗಿರುವ ಈ ರೈತವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.








