ಮೂರು ತಿಂಗಳ ಹಿಂದೆ ₹40 ಇದ್ದ ಸೋನಾ ಮಸೂರಿ ಅಕ್ಕಿ ಈಗ ₹75ಕ್ಕೆ ಏರಿಕೆ; ಆರ್‌ಎನ್‌ಆರ್ ₹80, ಎಚ್‌ಎಂಟಿ ₹85, ಜೀರಾ ಅಕ್ಕಿ ₹96ಕ್ಕೆ ಹೆಚ್ಚಳ
ಬೆಂಗಳೂರು: ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಭತ್ತದ ಬೆಳೆಗೆ ನೀರು ಹರಿಸದೆ ಅನ್ನದಾತ ರೈತರ ಬೆಳೆ ನಾಶಕ್ಕೆ ಕಾರಣವಾಗಿರುವ ಕಾಂಗ್ರೆಸ್ ಸರ್ಕಾರ, ಇದೀಗ ಮಾರುಕಟ್ಟೆಯಲ್ಲಿ ಅಕ್ಕಿ ಅಭಾವ ಸೃಷ್ಟಿಸಿ ಜನಸಾಮಾನ್ಯರ ಬದುಕಿಗೂ ಬರೆ ಎಳೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲು, ಮೊಸರು, ತುಪ್ಪ ಹಾಗೂ ಬಸ್ ಪ್ರಯಾಣ ದರ ಏರಿಕೆ ಮೂಲಕ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿರುವ ಸರ್ಕಾರ, ಇದೀಗ ಬಡ ಮತ್ತು ಮಧ್ಯಮ ವರ್ಗದ ಜನರು ಪ್ರತಿನಿತ್ಯ ಬಳಸುವ ಅಕ್ಕಿಯ ಬೆಲೆಯನ್ನೂ ಗಗನಕ್ಕೇರಿಸಿದೆ. ಮೂರು ತಿಂಗಳ ಹಿಂದೆ ಕೆಜಿಗೆ ₹40 ಇದ್ದ ಸೋನಾ ಮಸೂರಿ ಅಕ್ಕಿ ಈಗ ₹75ಕ್ಕೆ ತಲುಪಿದೆ. ಆರ್‌ಎನ್‌ಆರ್ ಅಕ್ಕಿ ₹80, ಎಚ್‌ಎಂಟಿ ₹85 ಹಾಗೂ ಜೀರಾ ಅಕ್ಕಿ ₹96ಕ್ಕೆ ಏರಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಕ್ಕಿ ಬೆಲೆ ಕೆಜಿಗೆ ₹150 ತಲುಪುವ ಆತಂಕ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಕಾಲುವೆಗಳಿಗೆ ನೀರು ಹರಿಸದೆ ರೈತರ ಭತ್ತದ ಬೆಳೆ ನಾಶವಾಗಲು ಕಾರಣವಾಗಿದ್ದೇಕೆ? ರೈತರ ಉತ್ಪಾದನೆ ಕುಂಠಿತವಾಗಿ ಮಾರುಕಟ್ಟೆಯಲ್ಲಿ ಅಕ್ಕಿಯ ಅಭಾವ ಸೃಷ್ಟಿಯಾಗಲು ನಿಮ್ಮ ಸರ್ಕಾರದ ನಿರ್ಧಾರಗಳೇ ಕಾರಣವಲ್ಲವೇ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಒಂದೆಡೆ ರೈತರಿಗೆ ಸಮರ್ಪಕ ನೀರು ಒದಗಿಸದೆ ಬೆಳೆ ನಷ್ಟಕ್ಕೆ ಕಾರಣವಾಗಿರುವ ಸರ್ಕಾರ, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಇದರ ನೇರ ಹೊರೆ ಸಾಮಾನ್ಯ ಗ್ರಾಹಕರ ಮೇಲೆ ಬೀಳುತ್ತಿದೆ. ದಿನನಿತ್ಯದ ಆಹಾರವಾಗಿರುವ ಅಕ್ಕಿಯನ್ನೇ ಖರೀದಿಸಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರ ಹಿಡಿದು, ಉಚಿತ ಅಕ್ಕಿ ನೀಡುವ ಭರವಸೆಗಳನ್ನು ನೀಡಿದ ಕಾಂಗ್ರೆಸ್ ಸರ್ಕಾರ, ಇದೀಗ ಜನಸಾಮಾನ್ಯರು ತಮ್ಮ ದುಡಿಮೆಯ ಹಣದಲ್ಲಿ ದಿನನಿತ್ಯದ ಅಕ್ಕಿಯನ್ನೂ ಖರೀದಿಸಲಾಗದ ಪರಿಸ್ಥಿತಿಯನ್ನು ನಿರ್ಮಿಸಿದೆ. ರೈತರ ಹಿತಾಸಕ್ತಿ ಮತ್ತು ಗ್ರಾಹಕರ ಬದುಕು ಎರಡನ್ನೂ ಕಡೆಗಣಿಸಿರುವ ಈ ತುಘಲಕ್ ಆಡಳಿತಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿ ರೈತರ ಭತ್ತದ ಬೆಳೆಗಳಿಗೆ ಅಗತ್ಯ ನೀರು ಒದಗಿಸಬೇಕು. ಅಕ್ಕಿ ಮಾರುಕಟ್ಟೆಯಲ್ಲಿನ ಅಭಾವ ಮತ್ತು ಬೆಲೆ ಏರಿಕೆಗೆ ಕಾರಣಗಳನ್ನು ಪರಿಶೀಲಿಸಿ, ಬೆಲೆ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.








