BSWML ಟೆಂಡರ್ಗಳಲ್ಲಿ ಗೋಲ್ಮಾಲ್ ಆರೋಪ; ಜಿಎಸ್ಟಿ, ಪ್ರೀಮಿಯಂ ಹೆಸರಿನಲ್ಲಿ ಶೇ.14ರಷ್ಟು ಹೆಚ್ಚುವರಿ ಹೊರೆ, ಸಂಪುಟಕ್ಕೆ ತಪ್ಪು ಮಾಹಿತಿ ನೀಡಿರುವ ಶಂಕೆ
ಬೆಂಗಳೂರು: ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಬಣ್ಣಬಣ್ಣದ ಕನಸುಗಳನ್ನು ಬಿತ್ತಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇದೀಗ ರಾಜ್ಯದ ರಾಜಧಾನಿಯನ್ನೇ ಕಸದ ತಿಪ್ಪೆಯನ್ನಾಗಿಸಿದೆ. ನಗರದ ಕಸ ವಿಲೇವಾರಿ ಗುತ್ತಿಗೆಗಳಲ್ಲೂ ಗೋಲ್ಮಾಲ್ ಮತ್ತು ಕಮಿಷನ್ ದಂಧೆಯ ಆರೋಪಗಳು ಕೇಳಿಬರುತ್ತಿದ್ದು, ಇಂತಹ ಲಜ್ಜೆಗೆಟ್ಟ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮೂಲಕ ನಡೆದಿರುವ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಸಚಿವ ಸಂಪುಟಕ್ಕೆ ತಪ್ಪು ಮಾಹಿತಿ ನೀಡಿರುವ ಆರೋಪ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಶ್ನೆ ಹಾಗೂ ಜಿಎಸ್ಟಿ ಮತ್ತು ಪ್ರೀಮಿಯಂ ಹೆಸರಿನಲ್ಲಿ ಶೇ.14ರಷ್ಟು ಹೆಚ್ಚುವರಿ ದರ ವಿಧಿಸಿರುವ ಆರೋಪಗಳು ಹಲವು ಅನುಮಾನಗಳಿಗೆ ಕಾರಣವಾಗಿವೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಪ್ರಶ್ನಿಸಿರುವ ಅಶೋಕ್, ಸಿ.ವಿ. ರಾಮನ್ ನಗರ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರಗಳ ಟೆಂಡರ್ಗಳಲ್ಲಿ ಜಿಎಸ್ಟಿ ಹಾಗೂ ಪ್ರೀಮಿಯಂ ಹೆಸರಿನಲ್ಲಿ ದರಗಳ ಗೋಲ್ಮಾಲ್ ನಡೆದಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೇ ಗುತ್ತಿಗೆ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿದವರು ಯಾರು? ಸಚಿವ ಸಂಪುಟದ ನಿರ್ಧಾರವನ್ನೇ ಬದಿಗೊತ್ತಿ BSWML ಹಂತದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ? ಸಾರ್ವಜನಿಕರ ತೆರಿಗೆ ಹಣಕ್ಕೆ ಹೆಚ್ಚುವರಿ ಹೊರೆ ಬೀಳುವ ಶೇ.14ರಷ್ಟು ದರದ ಹಿಂದಿನ ಅಸಲಿ ಲೆಕ್ಕಾಚಾರವೇನು ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಬ್ರಾಂಡ್ ಬೆಂಗಳೂರು’ ಎಂದು ದಿನಬೆಳಗಾದರೆ ಪ್ರಚಾರ ಮಾಡಿಕೊಳ್ಳುವ ಸರ್ಕಾರ, ನಗರದ ಕಸ ವಿಲೇವಾರಿಯನ್ನೂ ಸಮರ್ಪಕವಾಗಿ ನಿರ್ವಹಿಸಲು ವಿಫಲವಾಗಿದೆ. ಇದೀಗ ಕಸದ ಟೆಂಡರ್ಗಳಲ್ಲೂ ಅಕ್ರಮಗಳ ಆರೋಪ ಕೇಳಿಬರುತ್ತಿರುವುದು ಆಡಳಿತದ ಪಾರದರ್ಶಕತೆಯನ್ನೇ ಪ್ರಶ್ನಿಸುವಂತಾಗಿದೆ. ಗುತ್ತಿಗೆಗಳ ಮೂಲಕ ಯಾರ ಜೇಬು ತುಂಬಿಸುವ ಹುನ್ನಾರ ನಡೆದಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿಗೆ ಬೇಕಿರುವುದು ಬ್ರಾಂಡ್ ಹೆಸರಿನ ಬೂಟಾಟಿಕೆಯಲ್ಲ, ಸ್ವಚ್ಛತೆ. ಅಭಿವೃದ್ಧಿಯ ಜಾಹೀರಾತಲ್ಲ, ಪಾರದರ್ಶಕ ಆಡಳಿತ. ಕಸ ವಿಲೇವಾರಿ ಟೆಂಡರ್ಗಳಲ್ಲಿನ ಅಕ್ರಮಗಳ ಆರೋಪಗಳಿಗೆ ಸರ್ಕಾರ ದಾಖಲೆ ಸಮೇತ ಉತ್ತರ ನೀಡಬೇಕು. ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಗರದ ಕಸ ವಿಲೇವಾರಿಯಲ್ಲೂ ಪಾರದರ್ಶಕತೆ ಕಾಪಾಡಲು ಸಾಧ್ಯವಾಗದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಕಮಿಷನ್ ಮತ್ತು ಅಕ್ರಮಗಳ ಆರೋಪಗಳಿಂದ ಸುತ್ತುವರಿದಿರುವ ಈ ಸರ್ಕಾರವನ್ನು ಜನರೇ ರಾಜಕೀಯವಾಗಿ ಕಸದ ಬುಟ್ಟಿಗೆ ಎಸೆಯಲಿದ್ದಾರೆ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.








