ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕರುನಾಡಿನ ಬಿ.ಎಸ್.ರಾಜು ನೇಮಕ
ಚಿಕ್ಕಮಗಳೂರು: ಭಾರತೀಯ ಸೇನೆಯ ಅತ್ಯುನ್ನತ ಹುದ್ದೆ ಸೇನೆಯ ಉಪ ಮುಖ್ಯಸ್ಥರಾಗಿ ಕರುನಾಡಿನ ಕಲಿ ಬಿ.ಎಸ್.ರಾಜು ಅಧಿಕಾರ ಸ್ವೀಕರಿಸಲಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಯೋಧ ಬಗವಳ್ಳಿ ಸೋಮಶೇಖರ ರಾಜು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮನೋಜ್ ನರವಣೆಯವರು ಸೇನೆಯ ಮುಖ್ಯಸ್ಥರಾಗಿ ನೇಮಕವಾದ ಬೆನ್ನಲ್ಲೇ ಅವರಿಂದ ತೆರವಾದ ಸ್ಥಾನವನ್ನು ಕನ್ನಡಿಗ ಬಿ.ಎಸ್.ರಾಜು ತುಂಬುತ್ತಿದ್ದಾರೆ.
ಬಿ.ಎಸ್.ರಾಜು ಅವರು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗುತ್ತಿರುವುದಕ್ಕೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೇ ದೇಶದ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ತಮ್ಮೂರಿನ ಹುಡುಗ ಸೇನೆಯ ಎರಡನೇ ಅತ್ಯುನ್ನತ ಸ್ಥಾನವನ್ನು ಅಲಂಕರಿಸುತ್ತಿರುವುದಕ್ಕೆ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜು ಅವರಿಗೆ ಜಯಘೋಷ ಕೂಗಿ, ನಮ್ಮೂರಿನ ಹುಡುಗ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.









