ಸೀಬೆ ಹಣ್ಣು ಕೀಳಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಸಹೋದರಿಯರ ಸಾವು
ಸೀಬೆ ಹಣ್ಣು ಕೀಳಲು ಹೋಗಿ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ದುರ್ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೇಚಣ್ಣ ವೇದ ದಂಪತಿಗಳ ಮಕ್ಕಳಾದ 8 ನೇ ತರಗತಿ ಓದುತ್ತಿದ್ದ 14 ವರ್ಷದ ಪೂಜಿತಾ ಮತ್ತು 6 ನೇ ತರಗತಿ ಓದುತ್ತಿದ್ದ 13 ವರ್ಷದ ಪುಣ್ಯ ಮೃತ ಸಹೋದರಿಯರು.
ರೇಚಣ್ಣ ಅವರು ಜಮೀನನಲ್ಲೇ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಕಾರ್ಯ ನಿಮಿತ್ತ ಮನೆಯವರೊಡನೆ ಹೊರಗಡೆ ತೆರಳಿದ್ದರಂತೆ. ಮನೆಯಲ್ಲಿ ಅಜ್ಜಿ ಮಾಡಿಕೊಟ್ಟ ತಿಂಡಿ ತಿಂದು ಇಬ್ಬರು ಬಾಲಕಿಯರು ಸೀಬೆಹಣ್ಣು ಕೀಳಲು ತೆರಳಿದ್ದಾರೆ. ಈ ವೇಳೆ ಮರದ ಮೇಲಿದ್ದ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಹೊಂಡದಿಂದ ಮೇಲೆ ಬರಲಾಗದೆ ಬಾಲಕಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬಾಲಕಿಯರ ಶವಗಳನ್ನು ಮೇಲಕ್ಕೆತ್ತಿದ್ದು ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.








