PSI ಅಕ್ರಮ ನೇಮಕಾತಿ | ಎಲ್ಲ ಆರೋಪಿಗಳು ಜೈಲಿಗೆ ಹೋಗುತ್ತಾರೆ : ಆರಗ ಜ್ಞಾನೇಂದ್ರ
ತುಮಕೂರು: PSI ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಅವರ ಮಕ್ಕಳು, ಹಣ ಕೊಟ್ಟವರು, ಹಣ ಪಡೆದವರು, ಮಧ್ಯವರ್ತಿಗಳು ಎಲ್ಲರೂ ಜೈಲಿಗೆ ಹೋಗುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿ ABVP ಕಾರ್ಯಕರ್ತರು ಅಕ್ರಮ ನೇಮಕಾತಿ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿರುವಾಗ ಅಲ್ಲಿಗೆ ಆಗಮಿಸಿದ ಗೃಹ ಸಚಿವರು ಆರೋಪಿಗಳು ಯಾವುದೇ ಪಕ್ಷದವರಾಗಲಿ, ಜಾತಿಯವರಾಗಲಿ ಅವರಿಗೆ ಶಿಕ್ಷೆಯಾಗುತ್ತದೆ. ಈ ಜಾಲದ ತಾಯಿ ಬೇರನ್ನು ಹುಡುಕುತ್ತಿದ್ದೇವೆ ಎಂದು ತಿಳಿಸಿದರು.
ಇನ್ನೂ ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಹಿಡಿದು ಜೈಲಿಗೆ ಹಾಕುತ್ತಿದ್ದೇವೆ. ಇನ್ಮುಂದೆ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರು 10 ಬಾರಿ ಎದೆಮುಟ್ಟಿ ನೋಡಿಕೊಳ್ಳಬೇಕು. ಸಾಧ್ಯವಾದರೆ ಕಾನೂನಿಗೂ ತಿದ್ದುಪಡಿ ತರಲಿದ್ದೇವೆ ಎಂದರು.
ಹಾಗೇ ಯಾರು ಕಷ್ಟಪಟ್ಟು ಪರೀಕ್ಷೆ ಬರೆಯುತ್ತಾರೋ ಅವರಿಗೆ ಕೆಲಸ ಸಿಗುವಂತಾಗಬೇಕು. ನಮಗೆ ಬದ್ಧತೆ ಇದೆ, ಹಾಗಾಗಿ ಇಷ್ಟೊಂದು ಮಂದಿ ಆರೋಪಿಗಳನ್ನು ಬಂಧಿಸುತ್ತಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುವ ರೀತಿ ಮಾಡುತ್ತೇವೆ. ಪರೀಕ್ಷೆಯಲ್ಲಿ ಅಕ್ರಮ ನಡೆಯದ ಹಾಗೆ ನಮ್ಮ ಸರ್ಕಾರ ಇತಿಶ್ರೀ ಹಾಡಲಿದೆ ಎಂದು ಹೇಳಿದರು.
ಮುಂದುವರೆದು ನಮ್ಮ ಇಲಾಖೆಯಲ್ಲಿ ಅಕ್ರಮ ನೇಮಕಾತಿ ಆಗಲೇ ಇಲ್ಲ, ಅದನ್ನು ತಡೆಗಟ್ಟಿದ್ದೇವೆ. ನೇಮಕಾತಿ ಆಗುವ ಹಂತದಲ್ಲಿ ನನಗೆ ಮಾಹಿತಿ ಬಂದಾಗ, ಸೂಕ್ತ ದಾಖಲಾತಿ ಸಿಕ್ಕಿದೆ. ಕೇವಲ 2 ಗಂಟೆಯಲ್ಲಿ ಸಿಐಡಿ ತಂಡ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.








