Virat | ನಾನು ನೋಡಿದ ಅದ್ಭುತ ಇನ್ನಿಂಗ್ಸ್.. ವಿರಾಟ್
ಎಲಿಮಿನೇಟರ್ ಮ್ಯಾಚ್ ಹೀರೋ ರಜತ್ ಪಟಿದಾರ್ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ತಾವು ನೋಡಿದ ಅತ್ಯುತ್ತಮ ಇನ್ನಿಂಗ್ಸ್ ಗಳಲ್ಲಿ ಪಟಿದಾರ್ ಇನ್ನಿಂಗ್ಸ್ ಕೂಡ ಒಂದು ಎಂದು ಸಹ ಆಟಗಾರನ ಪ್ರದರ್ಶನವನ್ನ ವಿರಾಟ್ ಕೊಂಡಾಡಿದ್ದಾರೆ. ಒತ್ತಡದ ಸಂದರ್ಭದಲ್ಲಿ ಎದುರಾಳಿಗಳ ಮೇಲೆ ಸವಾರಿ ಮಾಡಿದ ಪಟಿದಾರ್ ಬ್ಯಾಟಿಂಗ್ ವಿಧಾನಕ್ಕೆ ವಿರಾಟ್ ಕೊಹ್ಲಿ ಸಲಾಂ ಎಂದಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ಪಟಿದಾರ್ ತನ್ನ ತಾಕತ್ತು ತೋರಿಸಿದ್ದಾರೆ ಎಂದು ಕೊಹ್ಲಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮುಂದಿನ ಹಂತ ತಲುಪಬೇಕಿದ್ದರೇ ಗೆಲ್ಲಲೇಬೇಕಿದ್ದ ಮ್ಯಾಚ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ. ಕೊಲ್ಕತ್ತಾದಲ್ಲಿನ ಈಡನ್ ಗಾರ್ಡರ್ನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ತಂಡದ ವಿರುದ್ಧ ಆರ್ ಸಿಬಿ 14 ರನ್ ಗಳ ಅಂತರ ಗೆಲುವು ಸಾಧಿಸಿದೆ. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿರುವ ಕ್ವಾಲಿಫೈಯರ್ 2ಕ್ಕೆ ಬೆಂಗಳೂರು ತಂಡ ಅರ್ಹತೆ ಪಡೆದುಕೊಂಡಿದೆ.

ಆದ್ರೆ ಈ ಗೆಲುವಿನಲ್ಲಿ ಯುವ ಬ್ಯಾಟರ್ ರಜತ್ ಪಟಿದಾರ್ ಪ್ರಮುಖ ಪಾತ್ರವಹಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. 54 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ ಗಳ ನೆರವಿಂದ 112ರನ್ ಗಳಿಸಿದ ಪಟಿದಾರ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇವರಿಗೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡ ಉತ್ತಮ ಸಾಥ್ ನೀಡಿದರು.
ಈ ಹಿನ್ನೆಲೆಯಲ್ಲಿ ರಜತ್ ಪಟಿದಾರ್ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಇನ್ನು ಪಂದ್ಯದ ಬಳಿಕ ಪಟಿದಾರ್ ಬಗ್ಗೆ ಮಾತನಾಡುತ್ತಾ ವಿರಾಟ್, ಇದು ನಾನು ನೋಡಿದ ಅದ್ಭುತ ಇನ್ನಿಂಗ್ಸ್ ಎಂದುಕೊಂಡಾಡಿದ್ದಾರೆ.
ನನ್ನ ಸುದೀರ್ಘ ಕೆರಿಯರ್ ನಲ್ಲಿ ನಾನು ತುಂಬಾ ಅದ್ಭುತ ಇನ್ನಿಂಗ್ಸ್ ಗಳನ್ನು ನೋಡಿದ್ದೇನೆ. ಪಂದ್ಯದ ಗತಿಯನ್ನೇ ಬದಲಿಸಿದ ಆಟವನ್ನ ನೋಡಿದ್ದೇನೆ. ಒತ್ತಡದಲ್ಲಿ ಯಾವುದಕ್ಕೂ ಜಗ್ಗದೇ ಮಿಂಚಿರುವ ಆಟಗಾರರನ್ನ ನೋಡಿದ್ದೇನೆ. ಆ ರೀತಿಯ ಪ್ರದರ್ಶನವನ್ನು ಇದೀಗ ಎಲಿಮಿನೇಟರ್ ಪಂದ್ಯದಲ್ಲಿ ನೋಡಿದ್ದೇನೆ. ತೀವ್ರ ಒತ್ತಡದಲ್ಲಿ ಪ್ಲೇ ಆಫ್ಸ್ ನಲ್ಲಿ ಶತಕ ಬಾರಿಸಿದ ರೀತಿ ತುಂಬಾ ಅದ್ಭುತವಾಗಿತ್ತು ಎಂದು ಪಟಿದಾರ್ ಆಟವನ್ನು ವಿರಾಟ್ ಕೊಹ್ಲಿ ಹಾಡಿ ಹೊಗಳಿದ್ದಾರೆ.
ಇದಲ್ಲದೇ ದಿನೇಶ್ ಕಾರ್ತಿಕ್ ಕೂಡ ಪಟಿದಾರ್ ಆಟವನ್ನು ಮೆಚ್ಚಿಕೊಂಡಿದ್ದು, ನಾನು ನೋಡಿದ ಬೆಸ್ಟ್ ಇನ್ನಿಂಗ್ಸ್ ಇದು. ಒಬ್ಬ ಅನ್ ಕ್ಯಾಪ್ಡ್ ಪ್ಲೇಯರ್ ಈ ರೀತಿ ಆಡಿದ್ದು, ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಔಟ್ ಸ್ಟಾಡಿಂಗ್ ಪ್ರದರ್ಶನ. ರಜತ್ ಪಟಿದಾರ್ ಆ ರೀತಿಯ ಪ್ರದರ್ಶನದಿಂದ ನನ್ನ ಮೇಲಿನ ಒತ್ತಡ ಕಡಿಮೆ ಆಯ್ತು ಎಂದಿದ್ದಾರೆ. virat-kohli-praises-rajat-patidar batting








