BJP ಅಚ್ಚರಿಯ ಆಯ್ಕೆ, ನಟ ಜಗ್ಗೇಶ್ ಗೆ ಒಲಿದ ರಾಜ್ಯಸಭಾ ಟಿಕೆಟ್
ದೇಶದಲ್ಲಿ 16 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಭಾನುವಾರ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ, ರಾಜಕಾರಣಿ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದೆ.
ರಾಜ್ಯಸಬಾ ಚುನಾವಣೆಗೆ ಸ್ಪರ್ಧಿಸಲು ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ ಎಂದು ಹೇಳಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ನಟ ಜಗ್ಗೇಶ್ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿರೋದರಿಂದ ಸಚಿವ ಎಸ್. ಟಿ. ಸೋಮಶೇಖರ್ ನಿರಾಳರಾಗಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ನಟ ಜಗ್ಗೇಶ್ ಅವರಿಗೆ ಬಿಜೆಪಿ ರಾಜ್ಯಸಭೆ ಟಿಕೆಟ್ ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ನವರಸ ನಾಯಕ, ಆತ್ಮೀಯ ಕನ್ನಡದ ಬಂಧುಗಳೆ 42 ವರ್ಷ ತಪಸ್ಸಿನಂತೆ ಕಲಾರಂಗದಲ್ಲಿ ಸೇವೆ ಮಾಡಿ ಕಾಯವಾಚಮನ ಸತ್ಯಮಾರ್ಗದಲ್ಲಿ ಬದುಕಿದ್ದೇನೆ. ನನ್ನ ನೆಚ್ಚಿನ ಭಾಜಪ ರಾಜ್ಯದ ಮುಖ್ಯ ಮಂತ್ರಿಗಳು, ಮಂತ್ರಿಗಳು, ಶಾಸಕಮಿತ್ರರು ಹಾಗೂ ರಾಜ್ಯ ರಾಷ್ಟ್ರದ ಸಂಘದ ಹಿರಿಯರ ಆಶೀರ್ವಾದದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವೆ ತಮಗೆ ಶಿರಬಾಗಿ ವಂದಿಸುವೆ. ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ ಎಂದು ಬರೆದುಕೊಂಡಿದ್ದಾರೆ.
ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಕರ್ನಾಟಕದಿಂದಲೇ ಮುಂದುವರಿಸಲು ನಿರ್ಧರಿಸಿದ್ದು, ಕೆ.ಸಿ ರಾಮಮೂರ್ತಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಟ ಜಗ್ಗೇಶ್‍ಗೆ ಅವಕಾಶ ನೀಡಿದೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ನಡೆಯಲಿದ್ದು, ವಿಧಾನಸಭೆಯಲ್ಲಿ ಪಕ್ಷಗಳ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಯಿಂದ ಇಬ್ಬರು ಹಾಗೂ ಕಾಂಗ್ರೆಸ್ ನಿಂದ ಒಬ್ಬರನ್ನು ಆಯ್ಕೆ ಮಾಡಲು ಅವಕಾಶ ಇದೆ. ನಾಲ್ಕನೇ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಗಳಲ್ಲಿ ಯಾವುದೇ ಬಹುಮತವಿಲ್ಲ. ಒಂದು ಪಕ್ಷ ಮತ್ತೊಂದು ಪಕ್ಷವನ್ನ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.