Bengaluru – ಸ್ನೇಹಿತನಿಂದ ಸ್ನೇಹಿತನ ಮೇಲೆಯೇ ಆಸಿಡ್ ಎರಚಿ ದಾಳಿ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ದಾಳಿ ಘಟನೆ ನಡೆದಿದೆ. ಸ್ನೇಹಿತನಿಂದ ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ ಮಾಡಿರುವ ಘಟನೆ ಕಬ್ಬನ್ ಪೇಟೆ 10 ಕ್ರಾಸ್ ಬಳಿ ವರದಿಯಾಗಿದೆ.
ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ತನ್ನ ಸ್ನೇಹಿತನಿಗೆ ಆ್ಯಸಿಡ್ ಎರಚಿದ್ದಾನೆ. ಜನತಾ ಅದಕ್ ಹಾಗೂ ಸಂತ್ರಸ್ತ ಸಾಂತ್ರಾ ಬೆಳ್ಳಿ ಪಾಲಿಶ್ ಅಂಗಡಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಆದರೆ ಭಾನುವಾರ ರಾತ್ರಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಜನತಾ ಅದಕ್ ಹಾಗೂ ಸಂತ್ರಸ್ತ ಕುಡಿದು ಗಲಾಟೆ ಮಾಡಿಕೊಂಡಿದ್ದರು.
ಈ ವೇಳೆ ಸಂತ್ರಸ್ತ ಮೊಬೈಲ್‍ನಲ್ಲಿ ವೀಡಿಯೋ ಮಾಡಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಜನತಾ ಅದಕ್ ಬೆಳ್ಳಿ ಪಾಲಿಶ್ ಮಾಡಲು ತಂದಿದ್ದ ಡೈಲೂಟ್ ಆ್ಯಸಿಡ್ ಎರಚಿದ್ದಾನೆ. ಘಟನೆಯಲ್ಲಿ ಸಂತ್ರಸ್ತ ಸಾಂತ್ರಾನ ಮುಖ, ಎದೆ ಗಾಯವಾಗಿದ್ದು, ಶೇ.30ರಷ್ಟು ಸುಟ್ಟಿದೆ.
ಸಂತ್ರಸ್ತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೈಸೂರಿನ ಬಳಿ ಓಡಾಡಿಕೊಂಡಿದ್ದ ಆರೋಪಿ ಜನತಾ ಅದಕ್‍ನನ್ನು ಮೈಸೂರು ಬಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








