NDRF ( ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ) ನಿಯಮಗಳನ್ನು ತಕ್ಷಣ ತಿದ್ದುಪಡಿ ಮಾಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.. ಈ ನಿಯಮಗಳ ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರತಿ 5 ವರ್ಷಗಳಿಗೊಮ್ಮೆ NDRF ನಿಯಮಗಳನ್ನು ತಿದ್ದುಪಡಿ ಮಾಡಿ, ಬೆಳೆಗಳಿಗೆ ಇನ್‍ಫುಟ್ ಸಬ್ಸಿಡಿಯ ಮೊತ್ತ, ಮೀನುಗಾರರ ದೋಣಿಗಳಿಗೆ ಆದ ಹಾನಿ, ಜನ ಜಾನುವಾರುಗಳಿಗೆ ಉಂಟಾದ ತೊಂದರೆ, ಮನೆ ಹಾನಿ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಆದ ನಷ್ಟಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಲಾಗುತ್ತದೆ. ಆದರೆ, 2015-20ಕ್ಕೆ ಅನ್ವಯವಾಗುವಂತೆ ರೂಪಿಸಿದ ನಿಯಮಗಳನ್ನು 2015ರಲ್ಲಿ ಪರಿಷ್ಕರಿಸಲಾಗಿತ್ತು. 2020ರಲ್ಲಿ ಮತ್ತೆ ಪರಿಷ್ಕರಿಸಬೇಕಾಗಿತ್ತು. ಇದುವರೆಗೂ ಪರಿಷ್ಕರಿಸಿಲ್ಲ ಎಂದಿದ್ದಾರೆ.
ಎರಡು ವರ್ಷಗಳಿಂದ ಎಲ್ಲ ಉತ್ಪನ್ನಗಳ ಬೆಲೆ ದುಪ್ಪಟ್ಟಾಗಿವೆ. ಹಣದುಬ್ಬರ ದಾಖಲೆ ಮಟ್ಟಕ್ಕೆ ತಲುಪಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಎನ್‍ಡಿಆರ್‍ಎಫ್ ನಿಯಮಗಳನ್ನು ಪರಿಷ್ಕರಿಸಿಲ್ಲ. ಪ್ರಸ್ತುತ ಒಂದು ಎಕರೆ ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಬೆಳೆದ ಬೆಳೆ ಶೇ 33ಕ್ಕಿಂತ ಹೆಚ್ಚು ಹಾನಿಯಾದರೆ ಸಿಗುವ ಪರಿಹಾರ ಕೇವಲ 2,720 ರೂ. ಅದರಲ್ಲೂ ಗರಿಷ್ಠ 2.5 ಹೆಕ್ಟೇರ್‌ಗೆ ಅಂದರೆ 6,800 ರೂ. ಮಾತ್ರ. ಪ್ರತಿ ಗುಂಟೆಗೆ ಕೇವಲ 68.ರೂ ಆದರೆ, ಒಂದು ಎಕರೆ ರಾಗಿ, ಜೋಳ ಬೆಳೆಯಲು ಕನಿಷ್ಠ 25000 ರೂ. ಖರ್ಚು ತಗಲುತ್ತದೆ. ಈ ಮೊತ್ತ ಪರಿಷ್ಕರಣೆ ಆಗಲೇಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮೂರು ವರ್ಷಗಳಿಂದ ಸಂಭವಿಸಿರುವ ನಷ್ಟದ ಪ್ರಮಾಣ ಒಂದು ಅಂದಾಜಿನ ಪ್ರಕಾರ 2 ಲಕ್ಷ ರೂ. ಕೋಟಿಗಳಷ್ಟಾಗಬಹುದು. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮೊತ್ತ ಕೇವಲ 3,965 ಕೋಟಿ ರೂ. ಮಾತ್ರ. ರಾಜ್ಯದಲ್ಲಿ ಮೇ ತಿಂಗಳಿಂದ ನವೆಂಬರ್ ವರೆಗೆ ಸಂಭವಿಸಿದ ಪ್ರವಾಹದ ಹಾನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದೇ ಮಾರ್ಚ್‌ನಲ್ಲಿ ಕೇವಲ ₹ 492 ಕೋಟಿ ಬಿಡುಗಡೆ ಮಾಡಿದೆ ಎಂದಿದ್ದಾರೆ.








