Eng vs India – ಕನ್ನಡಿಗ ಮಯಾಂಕ್ ಅಗರ್ವಾಲ್ ಟೆಸ್ಟ್ ತಂಡಕ್ಕೆ ಸೇರ್ಪಡೆ…
ಜುಲೈ 1 ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕೈಕ ಮತ್ತು ಕೊನೆಯ ಟೆಸ್ಟ್ ಪಂದ್ಯಕ್ಕಾಗಿ ಮಯಾಂಕ್ ಅಗರ್ವಾಲ್ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಲೀಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ರೋಹಿತ್ ಶರ್ಮಾ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದ್ದು ಬದಲಿ ಅಥವಾ ಸ್ಟಾಂಡ್ ಬೈ ಆಟಗಾರನಾಗಿ ಮಯಾಂಕ್ ಅವರನ್ನ ಕರೆಯಲಾಗಿದೆ. ಮುಂದಿನ ಟೆಸ್ಟ್ ಪಂದ್ಯದಲ್ಲಿ ಹಿಟ್ ಮ್ಯಾನ್ ಆಡುತ್ತಾರೋ ಇಲ್ಲವೋ ಎಂಬುದು ಸಸ್ಪೆನ್ಸ್ ಆಗಿ ಉಳಿದಿದೆ.
ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಮಯಾಂಕ್ ಅಗರ್ವಾಲ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಲು ಕರೆ ನೀಡಲಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 2021 ರ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಕೋವಿಡ್ -19 ಕಾರಣದಿಂದಾಗಿ ಮುಂದೂಡಬೇಕಾಯಿತು. ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಈ ಸರಣಿಯ ಕೊನೆಯ ಟೆಸ್ಟ್ ಪಂದ್ಯ ಈಗ ಜುಲೈ 1 ರಿಂದ ನಡೆಯಲಿದೆ.
ಈ ಪಂದ್ಯಕ್ಕೆ ರೋಹಿತ್ ಶರ್ಮಾ ಲಭ್ಯರಾಗುತ್ತಾರೆಯೇ ಎಂಬ ಸಸ್ಪೆನ್ಸ್ ಹಾಗೆಯೇ ಉಳಿದಿದೆ. ಇದುವರೆಗೂ ಟೀಂ ಇಂಡಿಯಾ ನಾಯಕತ್ವದ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಅಭ್ಯಾಸ ಪಂದ್ಯದ ಮಧ್ಯದಲ್ಲಿ ರೋಹಿತ್ ಕೋವಿಡ್ -19 ಪಾಸಿಟಿವ್ ಕಂಡುಬಂದಾಗ,ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಿಕೊಂಡಿದ್ದರು. ರೋಹಿತ್‌ಗೆ ಈ ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ, ಬುಮ್ರಾ ತಂಡದ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಎಂದು ನಂಬಲಾಗಿದೆ. ಕೆಎಲ್ ರಾಹುಲ್ ಈಗಾಗಲೇ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.
ರೋಹಿತ್ ಕೊನೆಯ ಪಂದ್ಯಕ್ಕೂ ಮುನ್ನವೇ ಚೇತರಿಸಿಕೊಳ್ಳದಿದ್ದರೆ ಅವರ ಸ್ಥಾನದಲ್ಲಿ ಮಯಾಂಕ್ ಅಗರ್ವಾಲ್ ಅವರು ಶುಭಮನ್ ಗಿಲ್ ಅವರೊಂದಿಗೆ ಇನ್ನಿಂಗ್ಸ್ ತೆರೆಯಲಿದ್ದಾರೆ. ರೋಹಿತ್ ಅವರ RTPCR ವರದಿ ಇಂದು ಬರಲಿದ್ದ ನಂತರ ನಿರ್ಧರಿಸಲಾಗುತ್ತದೆ.








