ಬೆಂಗಳೂರು : ಕೇಂದ್ರ ಸರ್ಕಾರ ಜೂನ್ 30ರ ವರೆಗೆ ಲಾಕ್ ಡೌನ್ ಘೋಷಣೆ ಮಾಡಿದೆ. ಇದರಲ್ಲಿ ದೇವಾಲಯಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಜೂನ್ 8 ರಿಂದ ದೇವಾಲಯಗಳು ತೆರೆಯಲಿವೆ. ಹೀಗಾಗಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಎಂಟು ಸೂತ್ರಗಳನ್ನು ಹೊರಡಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು, ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳು ಅಗತ್ಯವಾಗಿದೆ. ಸರ್ಕಾರವು ಮುಂಬರುವ ದಿನಗಳಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಬಹುದು. ಹೀಗಾಗಿ ದೇವಾಲಯಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕಿದೆ ಎಂದು ತಿಳಿಸಿದೆ.
ಎಂಟು ನಿಯಮಗಳು ಏನು?
1. ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಪ್ರತಿ ದಿನ ದೇವಾಯಲದ ಒಳ ಮತ್ತು ಹೊರ ಆವರಣಗಳಲ್ಲಿ ಕೋವಿಡ್ ವೈರಾಣು ತಡೆಗಟ್ಟಲು ಡಿಸ್ ಇನ್ಫೆಕ್ಟರ್ ಗಳನ್ನು ಸಿಂಪಡಿಸುವುದು.
2. ದೇವಾಲಯಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ, ದೇವಾಲಯದ ಆರ್ಥಿಕತೆಯನ್ನು ಗಮನದಲ್ಲಿಟ್ಟು ತಾತ್ಕಾಲಿಕವಾಗಿ ಎರಡು ತಿಂಗಳ ಅವಧಿಗೆ ನೇಮಿಸಿಕೊಳ್ಳುವುದು ಹಾಗೂ ಹೆಚ್ಚುವರಿ ಸೆಕ್ಯೂರಿಟಿ ಗಾರ್ಡ್ ಗಳ ವ್ಯವಸ್ಥೆಗೆ ತಗಲುವ ವೆಚ್ಚವನ್ನು ಆಯಾಯ ದೇವಾಲಯದ ನಿಧಿಯಿಂದ ಭರಿಸುವುದು.
3. ದೇವಾಲಯದ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ, ಒಳಾಂಗಣದಲ್ಲಿ ಅರ್ಚಕರಿಗೆ ಮಾಸ್ಕ್ ವಿನಾಯಿತಿ.
4. ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ದೇವಾಲಯಕ್ಕೆ ಪ್ರವೇಶಿಸುವ ದ್ವಾರಗಳಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡುವುದು. ಅವರ ಕೈಗಳಿಗೆ ಸ್ಯಾನಿಟೈಸರ್ ನೀಡುವುದು.
5. ಮಾಸ್ಕ್ ಕಡ್ಡಾಯವಾಗಿ ಧರಿಸಿರುವವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸುವುದು. ಈ ಬಗ್ಗೆ ಸೂಚನಾ ಫಲಕಗಳ ಮೂಲಕ ಭಕ್ತರ ಗಮನಕ್ಕೆ ತರುವುದು.
6. ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ದೇವಾಲಯದಲ್ಲಿ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳುವುದು.
7. ದೇವಾಲಯದ ಶೌಚಾಲಯಗಳನ್ನು ಆಗಿಂದ್ದಾಗ್ಗೆ ಸ್ವಚ್ಛಗೊಳಿಸುವುದು ಮತ್ತು ಕೋವಿಡ್ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
8. ಕೋವಿಡ್ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಇತರೆ ಕ್ರಮಗಳನ್ನು ದೇವಾಲಯದ ಅಧಿಕಾರಿಗಳು ಕೈಗೊಳ್ಳುವುದು.








