ಇಂದು ಸಂಚಾರಿ ವಿಜಯ್ ಹುಟ್ಟುಹಬ್ಬ – ಸ್ಮರಿಸಿದ ಆಪ್ತರು ಅಭಿಮಾನಿಗಳು….
ಇಂದು ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ 39ನೇ ಹುಟ್ಟುಹಬ್ಬ. ಮನೋಘ್ನ ನಟನೆ ಮೂಲಕ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದ್ದ ಸಂಚಾರಿ ವಿಜಯ್ ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ನೆನಪುಗಳು ಹಸಿರಾಗಿವೆ. ಸ್ನೇಹಿತರು, ಆಪ್ತರು, ಮತ್ತು ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಿದ್ದಾರೆ.
‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ಮಂಗಳಮುಖಿಯಾಗಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಅವರು ಮಾಡಿದ ಸಾಧನೆ ಕನ್ನಡ ಚಿತ್ರರಂಗದ ಇತಿಹಾಸದ ಪುಟದಲ್ಲಿ ಸದಾ ಸ್ಮರಣೀಯವಾಗಿ ಇರುತ್ತದೆ. ಇಂದು (ಜುಲೈ 17) ಸಂಚಾರಿ ವಿಜಯ್ ಅವರ ಹುಟ್ಟುಹಬ್ಬ. ಸಂಚಾರಿ ವಿಜಯ್ ಅವರ ಅನುಪಸ್ಥಿತಿ ಚಿತ್ರರಂಗಕ್ಕೆ ಕಾಡುತ್ತಿದೆ.
ರಂಗಭೂಮಿಯ ಹಿನ್ನೆಲೆಯಿಂದ ಬಂದವರು ಸಂಚಾರಿ ವಿಜಯ್. ಎಂಥ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲಂತಹ ಕಲಾವಿದ ಅವರಾಗಿದ್ದರು. ನಟನೆ, ಪ್ರತಿಭೆ ಇತ್ಯಾದಿ ವಿಷಯಗಳನ್ನೆಲ್ಲ ಬದಿಗಿಟ್ಟು ಸಾಮಾನ್ಯ ಮನುಷ್ಯನಾಗಿ ನೋಡಿದರೂ ಅವರೊಬ್ಬ ಹೃದಯವಂತ ವ್ಯಕ್ತಿ. ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದ ರಿಯಲ್ ಹೀರೋ ಅವರಾಗಿದ್ದರು.
2021ರ ಜೂನ್ 12ರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಸಂಚಾರಿ ವಿಜಯ್ ಸ್ನೇಹಿತ ನವೀನ್ ಅವರ ಬೈಕ್ನಲ್ಲಿ ಹಿಂಬದಿ ಕುಳಿತು ಪ್ರಯಾಣ ಮಾಡುತ್ತಿದ್ದ ವೇಳೆ ಅಫಘಾತ ಸಂಭವಿಸಿ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 14 ರಂದು ನಿಧನರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದರು.