ಬೆಂಗಳೂರಿಗೂ ಕಾಲಿಟ್ಟಿತಾ ಮಂಕಿಪಾಕ್ಸ್ – ಆಫ್ರಿಕಾ ಮೂಲದ ಪ್ರಜೆಗೆ ಸೋಂಕಿನ ಲಕ್ಷಣ..
ಕರೋನಾ ಬಳಿಕ ನಿಧಾನವಾಗಿ ಜಗತ್ತನ್ನೇ ಆವರಿಸಿರುವ ಮತ್ತೊಂದು ಸಾಂಕ್ರಮಿಕ ರೋಗ ಮಂಕಿಪಾಕ್ಸ್.. ಭಾರತ ಸೇರಿದಂತೆ 65 ರಾಷ್ಟ್ರಗಳಿಗೆ ಕಾಲಿಟ್ಟಿರುವ ಮಂಕಿಪಾಕ್ಸ್ ಬೆಂಗಳೂರಿಗೆ ಕಾಲಿಟ್ಟಿತಾ ಎಂಬ ಭೀತಿ ಶುರುವಾಗಿದೆ.
ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಮೂಲದ ಪ್ರಜೆಯಲ್ಲಿ ಮಂಕಿಪಾಕ್ಸ್ ಸೋಂಕಿನ ಲಕ್ಷಣ ಕಂಡು ಬಂದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಶಂಕಿತ ಆಫ್ರಿಕನ್ ಪ್ರಜೆಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕಿಸಲಾಗಿದ್ದು, ಆತನ ಮಾದರಿಗಳನ್ನು ಗುರುವಾರ ಸಂಜೆ ಪುಣೆಯ ಎನ್ಐವಿಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಆಫ್ರಿಕನ್ ಪ್ರಜೆ ಜುಲೈ 4 ರಂದು ಇಥಿಯೋಪಿಯಾದಿಂದ ಬಂದಿದ್ದರು. ಅವರು ಡಯಾಲಿಸಿಸ್ ಮತ್ತು ಪೂರ್ವ-ಕಸಿ ಮೌಲ್ಯಮಾಪನಕ್ಕೆ ಒಳಗಾಗುತ್ತಿದ್ದರು. ಇವರ ಚರ್ಮದ ಮೇಲೆ ದದ್ದುಗಳು ಸೇರಿದಂತೆ ಮಂಕಿಪಾಕ್ಸ್ನ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಅವರ ರಕ್ತ ಮತ್ತು ಚರ್ಮದ ಗಾಯಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಆಫ್ರಿಕಾ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಇರುವುದು ಖಚಿತಪಟ್ಟರೆ ನಗರದಲ್ಲೂ ಆತಂಕ ಎದುರಾಗುವುದು ಖಚಿತ.