ಮೈಸೂರು: ಟಿ ನರಸೀಪುರದಲ್ಲಿ ನಡೆದ ಗಣೇಶ ಶೋಭಾಯಾತ್ರೆ ವೇಳೆ ಪೊಲೀಸ್ ಅಧಿಕಾರಿಗಳ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿ, ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಸೀದಿ ಮುಂಭಾಗದಲ್ಲೇ ನಿಂತು ಇನ್ಸ್‌ಪೆಕ್ಟರ್‌ಗೆ ಧಮ್ಕಿ ಹಾಕಿದ್ದ ಸಿಂಹ ವಿರುದ್ಧ ಟಿ ನರಸೀಪುರ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಪ್ರತಾಪ್ ಸಿಂಹ ವಿರುದ್ಧ ದಾಖಲಾದ ಸೆಕ್ಷನ್‌ಗಳೇನು?
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಎರಡು ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸಿದ ಆರೋಪದಡಿ ಪ್ರತಾಪ್ ಸಿಂಹ ಮತ್ತು ಅವರ ಬೆಂಬಲಿಗರ ವಿರುದ್ಧ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಿಎನ್ಎಸ್ ಸೆಕ್ಷನ್ 132, 191, 194, 196, 299 ಸೇರಿದಂತೆ ಹಲವು ಕಠಿಣ ಕಾಯ್ದೆಗಳ ಅಡಿಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಈ ಎಫ್‌ಐಆರ್ ದಾಖಲಿಸಲಾಗಿದೆ.
ಶೋಭಾಯಾತ್ರೆ ಮಸೀದಿಯ ಬಳಿ ಬಂದಾಗ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರತಾಪ್ ಸಿಂಹ, ಅಲ್ಲಿನ ಇನ್ಸ್‌ಪೆಕ್ಟರ್ ಧನಂಜಯ ವಿರುದ್ಧ ಅತ್ಯಂತ ಕೀಳು ಮಟ್ಟದ ಪದಬಳಕೆ ಮಾಡಿದ್ದರು. ಹೇ ಧನಂಜಯ, ಮಸೀದಿ ಮುಂದೆ ಬಂದ್ರೆ ಎದ್ದು ಬಿಡುತ್ತಾ ಅಂದೆಯಲ್ಲೋ? ಬಾರೋ ಇಲ್ಲಿಗೆ, ಬಂದು ನೋಡು ಬಾರೋ ಎಂದು ಏಕವಚನದಲ್ಲಿ ಸವಾಲು ಹಾಕಿದ್ದರು. ಅಯೋಗ್ಯ ಧನಂಜಯ ಎಂದು ಪೊಲೀಸ್ ಅಧಿಕಾರಿಯನ್ನು ಜರಿದಿದ್ದ ಅವರು, ಒಂದೂವರೆ ವರ್ಷದ ನಂತರ ನಮ್ಮ ಸರ್ಕಾರ ಬಂದಾಗ ನಿನ್ನ ಲೆಕ್ಕ ಚುಕ್ತಾ ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದರು.
ನಮ್ಮ ಹೋರಾಟ ನಿಲ್ಲದು ಆರ್ ಅಶೋಕ್
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಕಾಂಗ್ರೆಸ್ ಸರ್ಕಾರದ ದಮನಕಾರಿ ನೀತಿಗೆ ನಾವು ಜಗ್ಗುವುದಿಲ್ಲ ಎಂದು ಹೇಳಿದ್ದಾರೆ. ಪ್ರತಾಪ್ ಸಿಂಹ ಮೇಲೆ ಈಗಾಗಲೇ 25 ಕೇಸ್‌ಗಳಿವೆ, ಇದು 26ನೇ ಕೇಸ್ ಅಷ್ಟೇ. ಇಂತಹ ಎಫ್‌ಐಆರ್‌ಗಳಿಗೆ ಅವರು ಹೆದರುವುದಿಲ್ಲ. ಆ ಇನ್ಸ್‌ಪೆಕ್ಟರ್ ವಿರುದ್ಧವೇ ಹಲವು ಗಂಭೀರ ಆರೋಪಗಳಿವೆ. ಈ ಸರ್ಕಾರ ಇರುವುದು ಕೇವಲ ಒಂದು ವರ್ಷ ಮಾತ್ರ, ಎಷ್ಟು ಬೇಕಾದರೂ ಕುಣಿಯಿರಿ. ನಾವು ಜನಪರ ಹೋರಾಟ ಮುಂದುವರಿಸುತ್ತೇವೆ ಎಂದು ಅಶೋಕ್ ಗುಡುಗಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆ
ಪೊಲೀಸ್ ಅಧಿಕಾರಿಯೊಬ್ಬರಿಗೆ ಸಾರ್ವಜನಿಕವಾಗಿ ಅವಮಾನ ಮಾಡಿದ್ದನ್ನು ಮೈಸೂರು ಕಾಂಗ್ರೆಸ್ ತೀವ್ರವಾಗಿ ಖಂಡಿಸಿತ್ತು. ಸಂವಿಧಾನಾತ್ಮಕ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬರು ಇಂತಹ ಪ್ರಚೋದನಾಕಾರಿ ಭಾಷಣ ಮಾಡುವುದು ಸರಿಯಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿತ್ತು. ಈಗ ಪ್ರಕರಣ ದಾಖಲಾಗಿರುವುದರಿಂದ ಪ್ರತಾಪ್ ಸಿಂಹ ಅವರಿಗೆ ಮುಂದಿನ ದಿನಗಳಲ್ಲಿ ಬಂಧನದ ಭೀತಿ ಎದುರಾಗುವ ಸಾಧ್ಯತೆ ಇದೆ.








