ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಬೆಂಗಳೂರು ಚರಣ ಇಂದಿನಿಂದ (ಆ.17)ದಿಂದ ಆರಂಭಗೊಳ್ಳಲಿದೆ. ಮೈಸೂರು ಚರಣ ಸೋಮವಾರ ಮುಕ್ತಾಯಗೊಂಡಿದ್ದು ಒಟ್ಟು 18 ಪಂದ್ಯಗಳಲ್ಲಿ ಬಾಕಿ ಇರುವ 16 ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯುವ ಮೊದಲ ಹಣಾಹಣಿಯಲ್ಲಿ ಮಂಗಳೂರು ಯುನೈಟೆಡ್ ತಂಡವು ಮೈಸೂರು ವಾರಿಯರ್ಸ್ ವಿರುದ್ಧ ಕಣಕ್ಕಿಳಿಯಲಿದೆ.ಎರಡನೇ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ಮುಖಾಮುಖಿಯಾಗಲಿವೆ.
6 ತಂಡಗಳು ತಲಾ 6 ಪಂದ್ಯಗಳನ್ನು ಆಡಿದ್ದು ಮಾಯಂಕ ಅಗರ್ವಾಲ್ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ 4 ಗೆಲುವುಗಳೊಂದಿಗೆ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರ್ ಸಮರ್ಥ ಸಾರಥ್ಯದ ಮಂಗಳೂರು ಯುನೈಟೆಡ್ ಸಹ 8 ಅಂಕ ಸಂಪಾದಿಸಿದ್ದು, 2ನೇ ಸ್ಥಾನ ಪಡೆದಿದೆ. ಕರುಣ್ ನಾಯರ್ ನೇತೃತ್ವದ ಮೈಸೂರು ಮೂರನೇ ಸ್ಥಾನದಲ್ಲಿದೆ. ಗುಲ್ಬರ್ಗಾ, ಹುಬ್ಬಳ್ಳಿ ತಂಡಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿವೆ. 6 ಪಂದ್ಯಗಳಲ್ಲಿ ಕೇವಲ 1 ಗೆಲುವು ಕಂಡಿರುವ ಶಿವಮೊಗ್ಗ ಸ್ಟ್ರೈಕರ್ಸ್ ತಂಡವು ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ.








